ಶ್ರೀನಗರ(ಜಮ್ಮು ಮತ್ತು ಕಾಶ್ಮೀರ):ನವೆಂಬರ್‌ನಲ್ಲಿ ಸುಮಾರು 1.27 ಲಕ್ಷ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಕಳೆದ ಏಳು ವರ್ಷಗಳಲ್ಲಿಯೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿರುವುದು ವಿಶೇಷವಾಗಿದೆ.
ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಕಾಶ್ಮೀರದ ಪ್ರವಾಸೋದ್ಯಮ ನಿರ್ದೇಶಕ ಡಾ.ಗುಲಾಮ್ ನಬಿ ಇಟೂ, ನವೆಂಬರ್‌ನಲ್ಲಿ ಸುಮಾರು 1.27 ಲಕ್ಷ ಪ್ರವಾಸಿಗರು ಮತ್ತು ಅಕ್ಟೋಬರ್‌ನಲ್ಲಿ 97 ಸಾವಿರ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಪ್ರವಾಸೋದ್ಯಮ ಪ್ರಚಾರ ಮತ್ತು ಕಾಶ್ಮೀರದಲ್ಲಿ ನಡೆಯುವ ಸಾಂಪ್ರದಾಯಿಕ ಉತ್ಸವಗಳು ಈ ದಾಖಲೆಗೆ ಕಾರಣ ಎಂದಿದ್ದಾರೆ.
ಜಮ್ಮು ವಿಶ್ವವಿದ್ಯಾಲಯದ ಹಾಸ್ಪಿಟಾಲಿಟಿ ಮತ್ತು ಮ್ಯಾನೇಜ್‌ಮೆಂಟ್ ಸ್ಕೂಲ್‌ನ ಪ್ರಾಧ್ಯಾಪಕ ಪರೀಕ್ಷಿತ್ ಮನ್ಹಾಸ್ ಪ್ರತಿಕ್ರಿಯಿಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷವಾಗಿ ಕಾಶ್ಮೀರಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದಾರೆ. ಸರ್ಕಾರದ ಪ್ರಯತ್ನಗಳು ಫಲ ನೀಡುತ್ತಿವೆ ಮತ್ತು ಜಮ್ಮು ಕಾಶ್ಮೀರ ಸಹಜ ಸ್ಥಿತಿಗೆ ಮರಳುತ್ತಿದೆ. ಪ್ರವಾಸೋದ್ಯಮಕ್ಕೆ ಇಂಥ ಹೆಚ್ಚಿನ ಪ್ರಯತ್ನಗಳ ಅಗತ್ಯವಿದೆ ಎಂದು ಹೇಳಿದರು.
ಡಿಸೆಂಬರ್ನಿಂದ ಫೆಬ್ರವರಿವರೆಗೆ ಕಾಶ್ಮೀರ ಸೇರಿದಂತೆ ವಾಯವ್ಯ ಭಾರತದ ಹಲವು ಭಾಗಗಳು, ದಕ್ಷಿಣ ಮತ್ತು ಈಶಾನ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಮತ್ತು ಹಿಮಾಲಯದ ತಪ್ಪಲಿನ ಕೆಲವು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನವಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:ಮೈಸೂರು ಮೂಲದ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ಗೆ ಐಎಂಎಫ್ನಲ್ಲಿ ಬಡ್ತಿ