ಕೃಷ್ಣಗಿರಿ (ತಮಿಳುನಾಡು): ಯೋಧನೊಬ್ಬನನ್ನು ಹೊಡೆದು ಕೊಲೆಗೈದ ಘಟನೆ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ. 29 ವರ್ಷದ ಭಾರತೀಯ ಸೇನೆಯ ಲ್ಯಾನ್ಸ್ ನಾಯಕ್ ಎಂ.ಪ್ರಭು ಎಂಬವರು ಹತ್ಯೆಯಾಗಿದ್ದಾರೆ. ಆಪ್ತ ಸಂಬಂಧಿಕರರೇ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಆಡಳಿತಾರೂಢ ಡಿಎಂಕೆ ಪಕ್ಷದ ಕಾರ್ಯಕರ್ತರು ಕಾರಣ ಎಂಬ ಆರೋಪ ಕೂಡ ಕೇಳಿಬಂದಿದೆ. ಹೀಗಾಗಿ ರಾಜಕೀಯ ಆರೋಪ- ಪ್ರತ್ಯಾರೋಪಗಳು ಶುರುವಾಗಿವೆ.
"ಬೊಚಂಪಲ್ಲಿ ಮೂಲದ ನಿವಾಸಿ ಪ್ರಭು ರಜೆ ಮೇಲೆ ಊರಿಗೆ ಬಂದಿದ್ದರು. ಫೆಬ್ರವರಿ 8ರಂದು ಪಂಚಾಯಿತಿಯ ಸಾರ್ವಜನಿಕ ನೀರಿನ ಟ್ಯಾಂಕ್ ಸಮೀಪ ಬಟ್ಟೆ ತೊಳೆಯುವ ವಿಚಾರವಾಗಿ ಸಂಬಂಧಿಕರ ಮಧ್ಯೆ ಗಲಾಟೆ ನಡೆದಿತ್ತು. ಇದೇ ವೇಳೆ ಯೋಧ ಪ್ರಭು ಮತ್ತು ಸಹೋದರ ಪ್ರಭಾಕರನ್ ಅವರೊಂದಿಗೆ ಆರೋಪಿಯಾದ ಸಂಬಂಧಿಯೂ ಆಗಿರುವ ಚಿನ್ನಸ್ವಾಮಿ ವಾಗ್ವಾದ ನಡೆಸಿದ್ದಾನೆ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸರೋಜ್ ಕುಮಾರ್ ತಿಳಿಸಿದರು.
''ಇದಾದ ನಂತರ ಸಂಜೆ ಚಿನ್ನಸ್ವಾಮಿ ತನ್ನ ಸಹಚರರೊಂದಿಗೆ ಆಗಮಿಸಿ ಪ್ರಭಾಕರನ್ ಹಾಗೂ ಪ್ರಭು ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರಭು ಅವರನ್ನು ಹೊಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಫಲಕಾರಿಯಾಗದೆ ಫೆಬ್ರವರಿ 14ರಂದು ಅವರು ಮೃತಪಟ್ಟರು" ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.
''ನಾಗರಸಂಪ್ಯಾಟಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307ರಡಿ ಕೊಲೆ ಯತ್ನ ಮತ್ತು 302ರಡಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೊಲೆಗೆ ಯಾವುದೇ ರಾಜಕೀಯ ಕಾರಣ ಇಲ್ಲ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರನ್ನು ವಶಕ್ಕೆ ಪಡೆಯಲಾಗಿದೆ. ಕೆಲವು ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ" ಎಂದು ಎಸ್ಪಿ ವಿವರಿಸಿದರು.