ಇಂಫಾಲ್ (ಮಣಿಪುರ):ಮಣಿಪುರ ರಾಜಧಾನಿ ಇಂಫಾಲ್ನಲ್ಲಿ ದುಷ್ಕರ್ಮಿಗಳು ಭಾರತೀಯ ಸೇನಾಪಡೆಯ ಯೋಧನನ್ನು ಅಪಹರಿಸಿ ಹತ್ಯೆಗೈದ ಘಟನೆ ವರದಿಯಾಗಿದೆ. ಭಾನುವಾರ ಖುನಿಂಗ್‌ಥೆಕ್ ಗ್ರಾಮದಲ್ಲಿ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹುತಾತ್ಮ ಯೋಧನನ್ನು ಇಂಫಾಲ್ ಪಶ್ಚಿಮದ ತರುಂಗ್ನ್ ಮೂಲದ ಸೆರ್ಟೊ ತಂಗ್‌ಥಾಂಗ್ ಕೋಮ್ ಎಂದು ಗುರುತಿಸಲಾಗಿದೆ. ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್‌ನ ಯೋಧ (ರಕ್ಷಣಾ ಭದ್ರತಾ ದಳ) ಕೋಮ್ರನ್ನು ಕಾಂಗ್‌ಪೋಕ್ಪಿ ಜಿಲ್ಲೆಯ ಲೆಮಾಖೋಂಗ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಕೋಮ್ ರಜೆ ಮೇಲೆ ತಮ್ಮ ಮನೆಗೆ ಹೋಗಿದ್ದರು. ಶನಿವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಅವರನ್ನು ಮನೆಯಿಂದ ಅಪಹರಿಸಿದ್ದಾರೆ. ಪ್ರತ್ಯಕ್ಷದರ್ಶಿಯಾಗಿದ್ದ 10 ವರ್ಷದ ಮಗ ಪೊಲೀಸರಿಗೆ ತಿಳಿಸಿರುವಂತೆ, ತಂದೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮೂವರು ಅಪರಿಚಿತರು ಮನೆಯೊಳಗೆ ಪ್ರವೇಶಿಸಿದ್ದಾರೆ. ತಂದೆಯ ಹಣೆಗೆ ಪಿಸ್ತೂಲ್ ಇರಿಸಿ ಬಲವಂತವಾಗಿ ಅವರನ್ನು ವಾಹನವೊಂದರಲ್ಲಿ ಕರೆದೊಯ್ದಿದ್ದಾರೆ.
ಭಾನುವಾರ ಬೆಳಗಿನ ಜಾವದವರೆಗೆ ಕೋಮ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಬೆಳಿಗ್ಗೆ 9:30ರ ಸುಮಾರಿಗೆ ಇಂಫಾಲ್ ಪೂರ್ವದ ಸೊಗೋಲ್ಮಾಂಗ್ ಪೊಲೀಸ್ ಠಾಣಾ ವ್ಯಾಪ್ತಿಯ ಖುನಿಂಗ್‌ಥೆಕ್ ಗ್ರಾಮದಲ್ಲಿ ಶವ ಸಿಕ್ಕಿದೆ. ಸಹೋದರ ಮತ್ತು ಸೋದರಮಾವ ಕೋಮ್ರ ಮೃತದೇಹವನ್ನು ಗುರುತಿಸಿದ್ದಾರೆ. ಯೋಧನ ತಲೆಗೆ ಗುಂಡು ತಗುಲಿದೆ. ಕೋಮ್ ಅವರು ಪತ್ನಿ, ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ. ಕುಟುಂಬದವರ ಇಚ್ಛೆಯಂತೆ ಮೃತದೇಹದ ಅಂತಿಮ ವಿಧಿ-ವಿಧಾನಗಳನ್ನು ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದರು. (ಪಿಟಿಐ)