ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ವಿರಾಮದ ನಂತರ ಜೂನ್ 30ರಿಂದ ವಾರ್ಷಿಕ ಅಮರನಾಥ ಯಾತ್ರೆ ಪ್ರಾರಂಭವಾಗಿದೆ. ನಿನ್ನೆ ಜಮ್ಮು ಮತ್ತು ಕಾಶ್ಮೀರದ ಬ್ರಾರಿಮಾರ್ಗ್ ಬಳಿ ಭಾರಿ ಭೂಕುಸಿತ ಸಂಭವಿಸಿತ್ತು. ಇದರಿಂದ ಹಾನಿಗೊಳಗಾದ ಎರಡು ಸೇತುವೆಗಳನ್ನು ಸೇನೆಯು ಅತ್ಯಂತ ತ್ವರಿತವಾಗಿ ಮರುನಿರ್ಮಾಣ ಮಾಡಿದೆ.
"ಜುಲೈ 01ರಂದು ಬಾಲ್ಟಾಲ್ ಆಕ್ಸಿಸ್‌ನಲ್ಲಿನ ಬ್ರಾರಿಮಾರ್ಗ್ ಬಳಿ 02 ಸೇತುವೆಗಳು ಭೂಕುಸಿತದಿಂದ ಹಾನಿಗೊಳಗಾಗಿದ್ದವು. ಸೇನೆಯು ರಾತ್ರಿಯಿಡೀ ಕಾರ್ಯನಿರ್ವಹಿಸಿ ಸೇತುವೆಗಳನ್ನು ಪುನರ್ ನಿರ್ಮಿಸಿದೆ. ಇದರಿಂದ ಅಮರನಾಥ ಯಾತ್ರಿಕರು ನಾಲ್ಕು ಗಂಟೆಗಳ ಕಾಲ ಹೆಚ್ಚು ಸುತ್ತು ಹಾಕುವುದನ್ನು ತಪ್ಪಿಸಿ, ಸುಲಭ ಮಾಡಿಕೊಡಲಾಗಿದೆ" ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.