ತೇಜ್‌ಪುರ (ಸಿಕ್ಕೀಂ): ಉತ್ತರ ಭಾರತ ಮತ್ತು ಈಶಾನ್ಯ ಭಾರತದಲ್ಲಿ ಹಿಮಪಾತ ಮುಂದುವರೆದಿದೆ. ಪೂರ್ವ ಸಿಕ್ಕೀಂನಲ್ಲಿ ಭಾರಿ ಹಿಮಪಾತದಿಂದಾಗಿ ಸಿಲುಕಿದ್ದ ಸುಮಾರು 370 ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಿಸಿದೆ. ಇದರಲ್ಲಿ ಮಕ್ಕಳು ಮತ್ತು ಮಹಿಳೆಯರು ಕೂಡ ಸೇರಿದ್ದಾರೆ.
ಇಲ್ಲಿನ ನತು ಲಾ ಮತ್ತು ತ್ಸೋಮ್ಗೊ (ಚಾಂಗು) ಸರೋವರದಿಂದ ಹಿಂದಿರುಗುತ್ತಿದ್ದ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹಲವಾರು ವಾಹನಗಳು ಹಿಮಪಾತದಿಂದಾಗಿ ಶನಿವಾರ ಅಲ್ಲಿಯೇ ಸ್ಥಗಿತಗೊಂಡಿದ್ದವು. ಈ ಮಾಹಿತಿ ಅರಿತ ಭಾರತೀಯ ಸೈನಿಕರು ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದರು. ಇದೇ ವೇಳೆ ಗಡಿ ರಸ್ತೆಗಳ ಸಂಸ್ಥೆಯ ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ (ಜಿಆರ್‌ಇಎಫ್) ಜೊತೆಗೆ ಸಮನ್ವಯ ಸಾಧಿಸಿದ ರಸ್ತೆ ಸಂಚಾರವನ್ನೂ ಸುಗಮಗೊಳಿಸಲಾಗಿತ್ತು.
50 ಮಕ್ಕಳು ಸೇರಿ 370 ಜನರ ರಕ್ಷಣೆ:ಹಿಮಪಾತದಿಂದಾಗಿ ಪ್ರವಾಸಿಗರು ಸಿಲುಕಿಕೊಂಡವರ ರಕ್ಷಣೆಯನ್ನು ರಾತ್ರಿಯಿಡೀ ಮಾಡಲಾಗಿದೆ. 178 ಪುರುಷರು ಮತ್ತು 142 ಮಹಿಳೆಯರು ಹಾಗೂ 50 ಮಕ್ಕಳು ಸೇರಿ ಒಟ್ಟಾರೆ 370 ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಅಲ್ಲದೇ, ಭಾನುವಾರ ಬೆಳಗ್ಗೆ ವೇಳೆಗೆ ಜಿಆರ್‌ಇಎಫ್ ನೆರವಿನೊಂದಿಗೆ ಹಿಮಪಾತವನ್ನು ತೆರವು ಮಾಡಿ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಆಪರೇಷನ್ ಹಿಮ್ರಾಹತ್: ಈ ಬಗ್ಗೆ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ಮಾಹಿತಿ ನೀಡಿದ್ದು, ಮಾರ್ಚ್ 11ರಂದು ಸಿಕ್ಕಿಂನಲ್ಲಿ ಭಾರಿ ಹಿಮಪಾತ ಉಂಟಾಗಿತ್ತು. ಇದರಿಂದ ಸುಮಾರು 400 ಪ್ರವಾಸಿಗರನ್ನು ಹೊತ್ತ ಸುಮಾರು 100 ವಾಹನಗಳು ಸಿಕ್ಕಿಹಾಕಿಕೊಂಡಿದ್ದವು. ತಕ್ಷಣವೇ ಪೊಲೀಸರು ಮತ್ತು ಆಡಳಿತದ ಸಹಯೋಗದಲ್ಲಿ ತ್ರಿಶಕ್ತಿ ಕಾರ್ಪ್ಸ್‌ನ ಪಡೆಗಳು ತಕ್ಷಣವೇ ಕಾರ್ಯಾಚರಣೆಗೆ ಇಳಿದವು. 'ಆಪರೇಷನ್ ಹಿಮ್ರಾಹತ್' ಹೆಸರಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದವು ಎಂದು ಹೇಳಿದರು.