ಜೈಸಲ್ಮೇರ್ (ರಾಜಸ್ಥಾನ) :ಭಾರತದ ಜೊತೆ ಎರಡು ದಿನಗಳ ಜಂಟಿ ಸಮರಾಭ್ಯಾಸ ನಡೆಸಲು 27 ದೇಶಗಳ ಸೇನಾಧಿಕಾರಿಗಳು ಭಾರತ - ಪಾಕಿಸ್ತಾನ ಗಡಿಯಲ್ಲಿರುವ ರಾಜಸ್ಥಾನದ ಜೈಸಲ್ಮೇರ್‌ಗೆ ಮಂಗಳವಾರ ತಲುಪಿದರು. ಮೊದಲ ದಿನದ ಅಭ್ಯಾಸದಲ್ಲಿ ಸ್ವದೇಶಿ ನಿರ್ಮಿತ ಯುದ್ಧೋಪಕರಣಗಳ ಶಕ್ತಿಯನ್ನು ಭಾರತ ಪ್ರದರ್ಶಿಸಿತು. ಬಳಿಕ ಚಿನ್ನದ ನಗರಿಯನ್ನು ಪ್ರದಕ್ಷಿಣೆ ಹಾಕಿದರು.
ನವೆಂಬರ್ 21, 22 ರಂದು ಎರಡು ದಿನ ವಿವಿಧ ದೇಶಗಳು ಜಂಟಿಯಾಗಿ ಸಮರಾಭ್ಯಾಸ ನಡೆಸಲಿವೆ. ವಿವಿಧ ದೇಶಗಳ ಸೇನಾ ಅಧಿಕಾರಿಗಳು ಜೈಸಲ್ಮೇರ್‌ಗೆ ಬಂದಿಳಿದರು. ಜೈಸಲ್ಮೇರ್‌ನಲ್ಲಿರುವ ಭಾರತೀಯ ಸೇನಾ ಅಧಿಕಾರಿಗಳು ಮಿತ್ರ ದೇಶಗಳ ಸೇನಾಧಿಕಾರಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಇದಾದ ನಂತರ ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಭಾರತೀಯ ಸೇನೆಯೊಂದಿಗೆ ತಮ್ಮ ಯುದ್ಧ ಕೌಶಲ್ಯಗಳನ್ನು ಹಂಚಿಕೊಂಡರು.
ಭಾರತೀಯ ಯೋಧರು ಮಿತ್ರ ರಾಷ್ಟ್ರಗಳ ಎದುರು ನಮ್ಮ ಉಡಾವಣಾ ಶಕ್ತಿ ಪರಿಚಯಿಸಿದರು. ಸ್ವದೇಶಿ ನಿರ್ಮಿತ ಸಮರ ಹೆಲಿಕಾಪ್ಟರ್ ರುದ್ರ, ದೀರ್ಘ ಮತ್ತು ಮಧ್ಯಮ ಅಂತರದಲ್ಲಿನ ಶತ್ರು ನೆಲೆಯನ್ನು ನಾಶಮಾಡುವ ಸಾಮರ್ಥ್ಯ ಹೊಂದಿರುವ ಅತ್ಯಂತ ಮಾರಕ ಫಿರಂಗಿಗಳ ಶಕ್ತಿಯನ್ನು ಪ್ರದರ್ಶಿಸಲಾಯಿತು. ಜೊತೆಗೆ ಕಣ್ಗಾವಲಿಗೆ ಮುಖ್ಯವಾದ ಡ್ರೋನ್‌ಗಳನ್ನೂ ಹಾರಾಟ ನಡೆಸಲಾಯಿತು.
ಭಾರತೀಯ ಸೇನೆಯ ಜೊತೆಗೆ 27 ಮಿತ್ರ ದೇಶಗಳು ಕೂಡ ತಮ್ಮ ಯುದ್ಧ ತಂತ್ರ ಮತ್ತು ಸಂಪನ್ಮೂಲಗಳನ್ನು ಪರಸ್ಪರ ಹಂಚಿಕೊಂಡವು. ಇದರಲ್ಲಿ ಭಾರತೀಯ ಸೇನೆಯ ವಿವಿಧ ಯುದ್ಧ ಸಾಮಗ್ರಿಗಳು ಯುದ್ಧದ ಪರಿಸ್ಥಿತಿಯಲ್ಲಿ ಶತ್ರುಗಳನ್ನು ನಾಶಮಾಡಲು ಬಳಸುವ ಫೈರ್ ಪವರ್ ಮತ್ತು ಅದರ ತಂತ್ರಗಳನ್ನು ಉಳಿದ ರಾಷ್ಟ್ರಗಳು ಸೂಕ್ಷ್ಮವಾಗಿ ಗಮನಿಸಿದವು.
ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ:ಜಂಟಿ ಸಮರಾಭ್ಯಾಸದ ಬಳಿಕ ಎಲ್ಲ ದೇಶಗಳ ಮಿಲಿಟರಿ ಅಧಿಕಾರಿಗಳು ಚಿನ್ನದ ನಗರಿ ಜೈಸಲ್ಮೇರ್‌ನ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು. ಸೇನಾಧಿಕಾರಿಗಳು ಜೈಸಲ್ಮೇರ್‌ನ ಕಲೆ ಮತ್ತು ಸಂಸ್ಕೃತಿಯ ಜೊತೆಗೆ ಇಲ್ಲಿನ ವಿವಿಧ ಪರಂಪರೆಗಳ ಪರಿಚಯ ಮಾಡಿಕೊಂಡರು. ಮೊದಲು ವಿಶ್ವವಿಖ್ಯಾತ ಸೋನಾರ್ ಕೋಟೆಗೆ ಭೇಟಿ ನೀಡಿದರು. ಸೋನಾರ್ ದುರ್ಗದ ವಿವಿಧ ಸ್ಥಳಗಳಲ್ಲಿ ಫೋಟೋ ತೆಗೆಸಿಕೊಂಡರು. ಗಡಿಸರ್ ಸರೋವರ ಪಟ್ವಾ ಹವೇಲಿಯ ಸೊಬಗನ್ನು ಕಣ್ತುಂಬಿಕೊಂಡರು. ಇದಾದ ನಂತರ, ಸೇನಾ ನೆಲೆಯ ಪಕ್ಕದಲ್ಲಿರುವ ಯುದ್ಧ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರು. ಅಲ್ಲಿರುವ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಇದನ್ನೂ ಓದಿ:'ಭಾರತ ವಿಶ್ವಕಪ್ ಗೆಲ್ಲುತ್ತಿತ್ತು, ಅಲ್ಲಿದ್ದ ಕೆಟ್ಟ ಶಕುನದಿಂದ ಸೋತಿತು': ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಟೀಕೆ