ಪಾಲಕ್ಕಾಡ್(ಕೇರಳ): ಪಾಲಕ್ಕಾಡ್‌ನ ಮಲಂಪುಳದಲ್ಲಿ ಪರ್ವತವೊಂದರಲ್ಲಿ ಸುಮಾರು 48 ಗಂಟೆಗಳಿಂದ ಸಿಲುಕಿದ್ದ ಯುವಕನೋರ್ವನನ್ನು ಭಾರತೀಯ ಸೇನೆ, ಪರ್ವತಾರೋಹಣ ತಂಡಗಳು ಹಾಗು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ವಿಶೇಷ ಕಾರ್ಯಾಚರಣೆ ನಡೆಸಿ ರಕ್ಷಿಸುವಲ್ಲಿ ಯಶಸ್ವಿಯಾಗಿವೆ.
ಮಲಂಪುಳದ ಚೆರಾಡುವಿನ 23 ವರ್ಷದ ಆರ್.ಬಾಬು ಎಂಬಾತ ಸೋಮವಾರ ತನ್ನ ಮೂವರು ಸ್ನೇಹಿತರೊಂದಿಗೆ ಬೆಟ್ಟ ಹತ್ತಲು ತೆರಳಿದ್ದಾನೆ. ಬೆಟ್ಟ ಹತ್ತಿ ಇಳಿಯುವಾಗ ಕಾಲು ಜಾರಿ ಬಿದ್ದು, ಕಡಿದಾದ ಜಾಗದಲ್ಲಿ ಸಿಲುಕಿಕೊಂಡಿದ್ದ.
ಈ ವೇಳೆ ಬಾಬು ಕಾಲಿಗೆ ಗಾಯವಾಗಿದೆ. ಬಳ್ಳಿ, ದೊಣ್ಣೆ ಬಳಸಿ ಬಾಬು ಅವರನ್ನು ರಕ್ಷಿಸಲು ಗೆಳೆಯರು ನಡೆಸಿದ ಪ್ರಯತ್ನ ವ್ಯರ್ಥವಾಗಿದ್ದು, ಬಾಬು ಸ್ನೇಹಿತರು ಬೆಟ್ಟ ಇಳಿದು ಸ್ಥಳೀಯರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೇರಳ ಅಗ್ನಿಶಾಮಕ ದಳ ಮತ್ತು ಮಲಂಪುಳ ಪೊಲೀಸರು ಮಧ್ಯರಾತ್ರಿಯ ವೇಳೆಗೆ ಸ್ಥಳಕ್ಕೆ ತಲುಪಿದ್ದಾರೆ. ಕತ್ತಲಲ್ಲಿ ಗೊತ್ತಾಗದ ಕಾರಣದಿಂದಾಗಿ ಅವರಿಗೆ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಧ್ಯವಾಗಲಿಲ್ಲ. ನಂತರ ಮಂಗಳವಾರದ ವೇಳೆಗೆ ಪಾಲಕ್ಕಾಡ್ ಜಿಲ್ಲಾಧಿಕಾರಿ ಮೃಣ್ಮಯಿ ಜೋಶಿ ಅವರ ಮನವಿಯಂತೆ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಮೂಲಕ ಯುವಕನನ್ನು ರಕ್ಷಿಸಲು ಯತ್ನಿಸಲಾಗಿದೆ.
ಹವಾಮಾನ ಮತ್ತು ಅಲ್ಲಿನ ಭೌಗೋಳಿಕ ಅಂಶಗಳ ಕಾರಣದಿಂದಾಗಿ ಪೈಲಟ್‌ಗೆ ಹೆಲಿಕಾಪ್ಟರ್ ಅನ್ನು ಬೆಟ್ಟದ ಮೇಲೆ ಇಳಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಕಾರ್ಯಾಚರಣೆ ವಿಫಲವಾಗಿದೆ. ನಂತರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾರತೀಯ ಸೇನೆಯ ನೆರವು ಕೋರಿದ್ದಾರೆ.
ಕೇರಳ ಸರ್ಕಾರದ ಮನವಿಯ ಮೇರೆಗೆ ಪರ್ವತಾರೋಹಣದಲ್ಲಿ ತರಬೇತಿ ಪಡೆದ ವೆಲಿಂಗ್ಟನ್‌ನ ಮದ್ರಾಸ್ ರೆಜಿಮೆಂಟ್ ಸೆಂಟರ್‌ನಿಂದ 12 ಸಿಬ್ಬಂದಿಯ ಒಂದು ತಂಡ ಮತ್ತು ಬೆಂಗಳೂರಿನ ಪ್ಯಾರಾಚೂಟ್ ರೆಜಿಮೆಂಟ್ ಸೆಂಟರ್‌ನಿಂದ 22 ಸಿಬ್ಬಂದಿಯ ಮತ್ತೊಂದು ತಂಡ ಮತ್ತು ಎನ್‌ಡಿಆರ್‌ಎಫ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿ, ಯುವಕನನ್ನು ಯಶಸ್ವಿಯಾಗಿ ರಕ್ಷಿಸಿವೆ.
ಇದನ್ನೂ ಓದಿ:ರಾಜ್ಯದ ಗಡಿ ದಾಟಿದ ಹಿಜಾಬ್-ಕೇಸರಿ ಶಾಲು ವಿವಾದ: ಮಧ್ಯಪ್ರದೇಶ, ಪುದುಚೇರಿಯಲ್ಲೂ ಕಾಣಿಸಿಕೊಂಡ ಕಿಡಿ