ಜೈಪುರ(ರಾಜಸ್ಥಾನ):ಸೇನಾ ನೇಮಕಾತಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, ಉದ್ಯೋಗಾಕಾಂಕ್ಷಿಗಳು ವರ್ಷಕ್ಕೊಮ್ಮೆ ಮಾತ್ರ ಅರ್ಜಿ ಸಲ್ಲಿಸಬೇಕು. ಮೊದಲು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ನೇಮಕಾತಿ ಯೋಜನೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬ್ರಿಗೇಡಿಯರ್ ಜಗದೀಪ್ ಚೌಹಾಣ್ ಅವರು, ಮೊದಲಿದ್ದ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಬದಲಿಸಿ ಅದನ್ನೀಗ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಸಿದ ಬಳಿಕ ನಡೆಸಲಾಗುವುದು. ಅಲ್ಲದೇ, ಓರ್ವ ಅಭ್ಯರ್ಥಿ ವರ್ಷದಲ್ಲಿ ಒಂದು ಬಾರಿ ಮಾತ್ರ ನೇಮಕಾತಿ ಕೋರಿ ಅರ್ಜಿ ಸಲ್ಲಿಸಬೇಕು. ಅದಕ್ಕಿಂತಲೂ ಹೆಚ್ಚು ಬಾರಿ ಅರ್ಜಿ ಹಾಕಿದಲ್ಲಿ ಊರ್ಜಿತವಾಗುವುದಿಲ್ಲ ಎಂದು ಹೇಳಿದರು.
ಸಾಮಾನ್ಯ ಪರೀಕ್ಷೆ ಮೊದಲು:ಈ ಮೊದಲು ಸೇನಾ ನೇಮಕಾತಿ ರ್ಯಾಲಿಗೆ ಅರ್ಜಿ ಕರೆದಾಗ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ನಡೆಸಿ, ಅಲ್ಲಿ ಅರ್ಹತೆ ಪಡೆದವರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಆ ಪದ್ಧತಿಯನ್ನು ಕೈಬಿಟ್ಟು ಮೊದಲೇ ಸಾಮಾನ್ಯ ಪರೀಕ್ಷೆ ನಡೆಸಲಾಗುವುದು. ಇದರಿಂದ ಅಭ್ಯರ್ಥಿಗಳ ನೇಮಕ ಸುಲಭವಾಗಲಿದೆ ಎಂದು ತಿಳಿಸಿದರು.
ಸೇನೆಗೆ ಯೋಧರ ನೇಮಕಕ್ಕಾಗಿ ಸರ್ಕಾರ ಅರ್ಜಿ ಆಹ್ವಾನಿಸಿದೆ. ಇದೇ ಫೆಬ್ರವರಿ 16 ರಿಂದ ಮಾರ್ಚ್ 15 ರೊಳಗೆ ಅರ್ಜಿ ಸಲ್ಲಿಸಬೇಕು. ಹೊಸ ನೇಮಕಾತಿ ವ್ಯವಸ್ಥೆಯ ಮೊದಲ ಹಂತವು ನೇಮಕಾತಿ ಅಧಿಸೂಚನೆ, ಆನ್‌ಲೈನ್ ನೋಂದಣಿ, ಪ್ರವೇಶ ಕಾರ್ಡ್‌ಗಳ ವಿತರಣೆ, ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯ ನಡವಳಿಕೆ, ಫಲಿತಾಂಶಗಳ ಪ್ರಕಟಣೆಯನ್ನು ಹೊಂದಿರುತ್ತದೆ.