ರಾಂಚಿ (ಜಾರ್ಖಂಡ್):ಬಂದೂಕಿನಿಂದ ಹಾರಿದ ಗುಂಡಿನಿಂದ ಗಾಯಗೊಂಡು ಯೋಧರೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಭಾನುವಾರ ನಡೆದಿದೆ. ತಲೆಗೆ ಗುಂಡೇಟು ಬಿದ್ದಿದ್ದರಿಂದ ಯೋಧನ ಸ್ಥಿತಿ ಚಿಂತಾಜನಕವಾಗಿದೆ. ಆದರೆ, ಈ ಗುಂಡು ಯೋಧನಿಗೆ ಯಾರಾದರೂ ಹಾರಿಸಿದ್ದಾರೋ ಅಥವಾ ಆಕಸ್ಮಿಕವಾಗಿ ಅಜಾಗರೂಕತೆಯಿಂದ ಗುಂಡು ಸಿಡಿದಿಯೋ ಎಂಬುದು ಇನ್ನೂ ತಿಳಿದುಬಂದಿಲ್ಲ.
ಇಲ್ಲಿನ ಖೇಲ್ ಗ್ರಾಮದಲ್ಲಿರುವ ಸೇನಾ ಶಿಬಿರದಲ್ಲಿ ಈ ಘಟನೆ ವರದಿಯಾಗಿದೆ. ಗುಂಡೇಟು ತಾಗಿ 44ನೇ ರೆಜಿಮೆಂಟ್ನ ಯೋಧ ಜಿಗ್ನೇಶ್ ಸೇನಾ ಟ್ರಕ್ನಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದರು. ಐಎನ್ಎಸ್ಎಎಸ್ ರೈಫಲ್ ಕೂಡ ಸ್ಥಳದಲ್ಲಿ ಪತ್ತೆಯಾಗಿದೆ. ಈ ಘಟನೆಯ ವಿಷಯ ತಿಳಿದ ಅಧಿಕಾರಿಗಳು ಮತ್ತು ಇತರ ಸೈನಿಕರು ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಸೇನಾ ಮೂಲಗಳ ಪ್ರಕಾರ, ಗಾಯಾಳು ಯೋಧ ಜಿಗ್ನೇಶ್ ತಮಿಳುನಾಡು ಮೂಲದವರಾಗಿದ್ದಾರೆ. ರೈಫಲ್‌ನಿಂದ ಗುಂಡು ಸಿಡಿದ ಶಬ್ದ ಕೇಳಿದ ನಂತರ ಇತರ ಯೋಧರು ಆತಂಕದಲ್ಲಿ ಸ್ಥಳಕ್ಕೆ ದೌಡಾಯಿಸಿದರು. ರೈಫಲ್‌ನಿಂದ ಹಾರಿದ ಗುಂಡು ಜಿಗ್ನೇಶ್ ತಲೆಗೆ ಹೊಕ್ಕಿದ್ದು, ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಸದ್ಯ ಯೋಧನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಗಾಯಾಳು ಸೈನಿಕ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿಯೇ ಇದ್ದರು. ಎಂದಿನಂತೆ ಇಂದು ಕೂಡ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ. ಆದರೆ, ಈ ಘಟನೆ ಹೇಗೆ ನಡೆಯಿತು ಎಂಬ ನಿಖರವಾದ ಮಾಹಿತಿ ಲಭ್ಯವಾಗಲಿಲ್ಲ. ಈ ಬಗ್ಗೆ ಸೇನಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.