ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಭಾರತೀಯ ಸೇನೆಯ ಶ್ವಾನ ಝೂಮ್ ಗುರುವಾರ ಕೊನೆಯುಸಿರೆಳೆದಿದೆ ಎಂದು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರ ಸದೆ ಬಡಿಯುವಲ್ಲಿ ಶ್ವಾನ ಝೂಮ್ ನೆರವಾಗಿತ್ತು. ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಎರಡು ಗುಂಡೇಟುಗಳಿಂದ ಶ್ವಾನ ಝೂಮ್ ಗಾಯಗೊಂಡಿತ್ತು. ಆದರೂ, ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಇದರ ಪರಿಣಾಮ ಭಯೋತ್ಪಾದಕರು ಹತರಾಗಿದ್ದರು.
ಈ ಗುಂಡಿನ ಕಾಳಗದ ವೇಳೆ ಶ್ವಾನ ಝೂಮ್ ಜೊತೆಗೆ ಇಬ್ಬರು ಸೈನಿಕರೂ ಗಾಯಗೊಂಡಿದ್ದರು. ನಂತರ ಶ್ವಾನ ಝೂಮ್ನನ್ನು ಅಡ್ವಾನ್ಸ್ ಫೀಲ್ಡ್ ವೆಟರ್ನರಿ ಹಾಸ್ಪಿಟಲ್ (54 AFVH)ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಅದು ಕೊನೆಯುಸಿರೆಳೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಳಗ್ಗೆ 11:45ರ ಸುಮಾರಿಗೆ ಶ್ವಾನ ಝೂಮ್ ಉತ್ತಮವಾಗಿಯೇ ಸ್ಪಂದಿಸುತ್ತಿತ್ತು. ಆದರೆ, ಇದ್ದಕ್ಕಿದ್ದಂತೆ ಏದುಸಿರು ಬಿಡಲು ಪ್ರಾರಂಭಿಸಿ ಕುಸಿದು ಬಿತ್ತು ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಶ್ವಾನವು ಆಪರೇಷನ್ ಟ್ಯಾಂಗ್‌ಪಾವಾಸ್‌ನ ಯುದ್ಧ ತಂಡದಲ್ಲೂ ಭಾಗವಹಿಸಿತ್ತು.
ಇದನ್ನೂ ಓದಿ:ಕಾಡುಗಳ್ಳರ ಸಿಂಹಸ್ವಪ್ನ ಬಂಡೀಪುರದ ರಾಣಾ ಇನ್ನಿಲ್ಲ