ಜಮ್ಮು: ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಇಂದು ಜಮ್ಮು ಜಿಲ್ಲೆಯಲ್ಲಿರುವ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಪ್ರದೇಶಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು. ಎರಡು ದಿನಗಳ ಪ್ರವಾಸಕ್ಕಾಗಿ ಜಮ್ಮುವಿಗೆ ಭೇಟಿ ನೀಡಿರುವ ಸೇನಾ ಮುಖ್ಯಸ್ಥರು, ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳಿವಿಕೆ ತಡೆ ಕಾರ್ಯಾಚರಣೆ ಕುರಿತು ಮಾಹಿತಿ ಪಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ವೈಟ್ ನೈಟ್ ಕಾರ್ಪ್ಸ್ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಎಲ್‌ಒಸಿ ಉದ್ದಕ್ಕೂ ಪರಿಸ್ಥಿತಿ ಪರಿಶೀಲನೆ ನಡೆಸಿದರು. ಕಾಶ್ಮೀರ ಕಣಿವೆಯಲ್ಲಿ ಅಲ್ಪಸಂಖ್ಯಾತರ ಹತ್ಯೆ ನಡೆಯುತ್ತಿರುವ ಸಂದರ್ಭದಲ್ಲಿ ನರವಣೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿರುವುದು ಭಾರಿ ಮಹತ್ವ ಪಡೆದುಕೊಂಡಿದೆ. ಇದೇ ತಿಂಗಳು ಕಣಿವೆ ರಾಜ್ಯದಲ್ಲಿ ಉಗ್ರರು 11 ಮಂದಿ ನಾಗರಿಕರನ್ನು ಹತ್ಯೆ ಮಾಡಿದ್ದಾರೆ.
ಈ ಮಧ್ಯೆ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಉಗ್ರರ ವಿರುದ್ಧ ಹೋರಾಟ ಮುಂದುವರಿಸಿ, ನಾಗರಿಕರ ಹತ್ಯೆಯ ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು.