ನವದೆಹಲಿ:ಜಹಾಂಗೀರ್‌ಪುರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಜಹಾಂಗೀರ್‌ಪುರಿ ಹಿಂಸಾಚಾರದಲ್ಲಿ ಶಸ್ತ್ರಾಸ್ತ್ರ ಪೂರೈಕೆದಾರ ಮತ್ತು ಘಟನೆಯ ಪ್ರಮುಖ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿಯನ್ನು ದೆಹಲಿಯ ಜಹಾಂಗೀರಪುರಿ ನಿವಾಸಿ ರಾಜನ್ ಅಲಿಯಾಸ್ ರಾಹುಲ್ (38) ಎಂದು ಗುರುತಿಸಲಾಗಿದ್ದು, ಆರೋಪಿ ಸುಮಾರು 70 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಅಷ್ಟೇ ಅಲ್ಲದೇ ಜಹಾಂಗೀರ್‌ಪುರಿಯಲ್ಲಿ ನಡೆದ ಕೋಮು ಗಲಭೆಕೋರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದು, ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಬ್ರಿಜೇಂದ್ರ ಕುಮಾರ್ ಯಾದವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಓದಿ:ದೆಹಲಿಯ ಜಹಾಂಗಿರ್ಪುರಿ ಹಿಂಸಾಚಾರ: ತನಿಖಾಧಿಕಾರಿಗಳ ಮೇಲೆ ಕಲ್ಲು ತೂರಾಟ
ಈ ಬಗ್ಗೆ ಮಾತನಾಡಿದ ಡಿಸಿಪಿ, ಆರೋಪಿಯು ಹೊರ ಉತ್ತರ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಅಪರಾಧಿಗಳಿಗೆ ಮಾರಲು ಬಂದೂಕುಗಳೊಂದಿಗೆ ಸ್ಕೂಟಿಯಲ್ಲಿ ಬರುತ್ತಿದ್ದನು. ಈ ಬಗ್ಗೆ ನಮಗೆ ಸುಳಿವು ಸಿಕ್ಕಿತ್ತು. ರಹಸ್ಯ ಮಾಹಿತಿಯ ಮೇರೆಗೆ ರೋಹಿಣಿ ಸೆಕ್ಟರ್ -36 ರ ಶಹಬಾದ್ ಡೈರಿ ಪ್ರದೇಶದಲ್ಲಿ ಆರೋಪಿಗಾಗಿ ನಾವು ಕಾಯುತ್ತಿದ್ದೆವು. ಆರೋಪಿಯು ಬವಾನಾ ರಸ್ತೆ ಬದಿಯಿಂದ ಸೆಕ್ಟರ್ 36 ರೋಹಿಣಿ ಕಡೆಗೆ ಸ್ಕೂಟಿಯಲ್ಲಿ ಬರುತ್ತಿದ್ದಾಗ ಸಿಬ್ಬಂದಿ ತಡೆದರು.
ಪೊಲೀಸ್ ಸಿಬ್ಬಂದಿಯನ್ನು ಗಮನಿಸಿದ ಆರೋಪಿಯು ತನ್ನ ಕಂಟ್ರಿಮೇಡ್ ಪಿಸ್ತೂಲ್‌ನಿಂದ ಗುಂಡು ಹಾರಿಸಿದನು. ನಾವು ಸಹ ಆತ್ಮರಕ್ಷಣೆ ಮತ್ತು ಆರೋಪಿಯ ಚಟುವಟಿಕೆಗಳನ್ನು ತಡೆಯಲು ಗುಂಡಿನ ದಾಳಿಗೆ ಪ್ರತ್ಯುತ್ತರ ನೀಡಿದೆವು. ಸ್ಥಳದಿಂದ ಆರೋಪಿ ಪರಾರಿಯಾಗುವುದನ್ನು ತಡೆಯಲು ಮೂರು ಸುತ್ತು ಗುಂಡು ಹಾರಿಸಿದೆವು. ಈ ವೇಳೆ ಆರೋಪಿಯ ಬಲಗಾಲಿಗೆ ಗುಂಡು ತಗುಲಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಓದಿ:ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ ನಿರಂತರ : ಸಚಿವ ಮಿಶ್ರಾ
ಆರೋಪಿ ರಾಹುಲ್ ಈ ಹಿಂದೆ ಪೊಲೀಸರೊಂದಿಗೆ ಎನ್‌ಕೌಂಟರ್, ಶಸ್ತ್ರಾಸ್ತ್ರ ಕಾಯ್ದೆ, ಸರಗಳ್ಳತನ, ಕಳ್ಳತನ ಮತ್ತು ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.