ಡೆಹ್ರಾಡೂನ್: ಜನವರಿ 2022 ರ ಹೊತ್ತಿಗೆ ಭಾರತವು ಸೂರ್ಯನ ಅಧ್ಯಯನಕ್ಕಾಗಿ ತನ್ನ ಮೊದಲ ಸೌರ ಮಿಷನ್ ಆದಿತ್ಯ ಎಲ್ -1 ಅನ್ನು ಪ್ರಾರಂಭಿಸಲಿದೆ. ಇಸ್ರೋ ಪ್ರಕಾರ, ಈ ಕಾರ್ಯಾಚರಣೆಯ ಉದ್ದೇಶವು ಯಾವುದೇ ಅಡೆತಡೆಗಳಿಲ್ಲದೇ ಸೂರ್ಯನ ಮೇಲೆ ಶಾಶ್ವತವಾಗಿ ಕಣ್ಣಿಡುವುದಾಗಿದೆ.
ವೆಬ್ ಇಂಟರ್ಫೇಸ್ನಲ್ಲಿ ಭಾರತದ ಮೊದಲ ಸೌರ ಬಾಹ್ಯಾಕಾಶ ಕಾರ್ಯಾಚರಣೆಯಿಂದ ಪಡೆದ ಡೇಟಾ ಸಂಗ್ರಹಿಸಲು ಸಮುದಾಯ ಸೇವಾ ಕೇಂದ್ರ ಸ್ಥಾಪಿಸಲಾಗಿದೆ. ಇದರಿಂದ ವಿಜ್ಞಾನಿಗಳು ಈ ಡೇಟಾವನ್ನು ತಕ್ಷಣವೇ ನೋಡಬಹುದಾಗಿದೆ. ಅದನ್ನು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸಬಹುದಾಗಿದೆ. ಈ ಕೇಂದ್ರಕ್ಕೆ ಆದಿತ್ಯ ಎಲ್ 1 ಸಪೋರ್ಟ್ ಸೆಲ್ (ಎಎಲ್ 1 ಎಸ್‌ಸಿ) ಎಂದು ಹೆಸರಿಡಲಾಗಿದೆ.
ಈ ಕೇಂದ್ರವನ್ನು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಇಸ್ರೋ ಮತ್ತು ಆರ್ಯಭಟ ರಿಸರ್ಚ್ ಇನ್ಸಿಟ್ಯೂಟ್ ಆಫ್ ಅಬ್ಸರ್ವೇಷನಲ್ ಸೈನ್ಸಸ್ ಜಂಟಿಯಾಗಿ ನಿರ್ಮಿಸಿವೆ. ಈ ಕೇಂದ್ರವನ್ನು ಅತಿಥಿ ವೀಕ್ಷಕರು ವೈಜ್ಞಾನಿಕ ದತ್ತಾಂಶಗಳ ವಿಶ್ಲೇಷಣೆ ಮತ್ತು ವಿಜ್ಞಾನ ವೀಕ್ಷಣಾ ಪ್ರಸ್ತಾಪಗಳ ತಯಾರಿಕೆಗಾಗಿ ಬಳಕೆ ಮಾಡುತ್ತಾರೆ.
ಈ ಕೇಂದ್ರವು ವಿಶ್ವದ ಇತರ ಬಾಹ್ಯಾಕಾಶ ವೀಕ್ಷಣಾಲಯಗಳೊಂದಿಗೆ ಸಂಪರ್ಕ ಸಾಧಿಸಲಿದೆ. ಸೌರ ಕಾರ್ಯಾಚರಣೆಗೆ ಸಂಬಂಧಿಸಿದ ಡೇಟಾವನ್ನು ಇದು ಒದಗಿಸುತ್ತದೆ. ಈ ಕೇಂದ್ರವು ಆದಿತ್ಯ ಎಲ್ 1 ನಿಂದ ಪಡೆದ ಡೇಟಾವನ್ನು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಇತರ ದೇಶಗಳಲ್ಲಿಯೂ ಪ್ರವೇಶಿಸುವಂತೆ ಮಾಡುತ್ತದೆ. ಇದರೊಂದಿಗೆ, ಹೆಚ್ಚು ಹೆಚ್ಚು ಜನರು ಈ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಪ್ರತಿಯೊಬ್ಬ ಆಸಕ್ತ ವ್ಯಕ್ತಿಗೆ ಡೇಟಾದ ವೈಜ್ಞಾನಿಕ ವಿಶ್ಲೇಷಣೆ ಮಾಡಲು ಇದು ಅನುವು ಮಾಡಿಕೊಡುತ್ತದೆ.