ಅಮರಾವತಿ:ಮಾರ್ಗದರ್ಶಿ ಚಿಟ್‌ಫಂಡ್ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಿದ ಆಂಧ್ರಪ್ರದೇಶ ಹೈಕೋರ್ಟ್ ಮಧ್ಯಂತರ ತೀರ್ಪನ್ನು ಕಾಯ್ದಿರಿಸಿದೆ. ಅಲ್ಲದೇ ಇದಕ್ಕೆ ಸಂಬಂಧಿಸಿದ ಇನ್ನೊಂದು ಪ್ರಕರಣವನ್ನು ಇಂದು(ಗುರುವಾರ) ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಇದಾದ ಬಳಿಕ ಎರಡೂ ಪ್ರಕರಣಗಳ ತೀರ್ಪು ಪ್ರಕಟಿಸಲಾಗುವುದು ಎಂದು ನ್ಯಾಯಪೀಠ ಹೇಳಿದೆ.
ಗುಂಟೂರು ಮತ್ತು ಕೃಷ್ಣಾ ಜಿಲ್ಲೆಗಳ ಚಿಟ್‌ಫಂಡ್ ಗ್ರೂಪ್‌ಗಳಿಗೆ ಸಂಬಂಧಿಸಿದ ಅರ್ಜಿಗಳ ವಾದ- ಪ್ರತಿವಾದಗಳು ಮುಕ್ತಾಯವಾಗಿವೆ. ಮಧ್ಯಂತರ ಆದೇಶದ ತೀರ್ಪನ್ನು ಮುಂದೂಡುತ್ತಿರುವುದಾಗಿ ನ್ಯಾಯಮೂರ್ತಿಗಳು ಪ್ರಕಟಿಸಿದರು. ಪ್ರಕಾಶಂ ಜಿಲ್ಲೆಯ ಚಿಟ್ ಗ್ರೂಪ್‌ಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಮತ್ತೊಂದು ಮೊಕದ್ದಮೆಯ ವಿಚಾರಣೆಯನ್ನು ಗುರುವಾರ ನಡೆಸಲಿದೆ. ಈ ಅರ್ಜಿಯ ವಿಚಾರಣೆಯ ಬಳಿಕ ಆದೇಶ ನೀಡಲಾಗುವುದು ಎಂದು ನ್ಯಾಯಮೂರ್ತಿ ಎನ್ ಜಯಸೂರ್ಯ ಅವರಿದ್ದ ಪೀಠ ಹೇಳಿದೆ.
ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಶ್ರೀರಾಮ್ ಅವರು, ಚಿಟ್‌ಫಂಡ್ ಗುಂಪುಗಳಲ್ಲಿ ಅವ್ಯವಹಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವ್ಯವಹಾರಕ್ಕೆ ತಡೆ ನೀಡಲಾಗಿತ್ತು. ಬಳಿಕ ಆಕ್ಷೇಪಣಾ ಅರ್ಜಿಗಳನ್ನು ಕೋರಲಾಗಿತ್ತು. ಇದರ ಆಧಾರದ ಮೇಲೆ ಸಾರ್ವಜನಿಕ ನೋಟಿಸ್ ಹೊರಡಿಸಲಾಗಿತ್ತು. ಅಲ್ಲದೇ, ಇಂತಹ ಪ್ರಕರಣದಲ್ಲಿ ಸುಮೋಟೋ ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸುವ ಅಧಿಕಾರ ಚಿಟ್ ರಿಜಿಸ್ಟ್ರಾರ್ಗೆ ಇದೆ ಎಂದು ವಾದಿಸಿದ್ದರು.
2008 ರಲ್ಲಿ ಹೊರಡಿಸಲಾದ ಅಧಿಸೂಚನೆಯ ಪ್ರಕಾರ, ಸಹಾಯಕ ಮತ್ತು ಉಪ ನೋಂದಣಾಧಿಕಾರಿಗಳಿಗೆ ಇಂತಹ ಅಧಿಕಾರವನ್ನು ನೀಡಲಾಗಿದೆ. ಚಿಟ್‌ಫಂಡ್ ಕಾಯಿದೆಯ ಸೆಕ್ಷನ್ 48(ಎಚ್) ಅಡಿಯಲ್ಲಿ ಉಪ ನೋಂದಣಾಧಿಕಾರಿಯು ಚಿಟ್ ಗುಂಪುಗಳ ಮೇಲೆ ಕ್ರಮ ಜರುಗಿಸುವ ಸ್ವಯಂಪ್ರೇರಿತ ಅಧಿಕಾರವನ್ನು ಹೊಂದಿರುತ್ತಾರೆ. ಅವರು ನೀಡಿದ ಶೋಕಾಸ್ ನೋಟಿಸ್ ಅನ್ನು ಪ್ರಶ್ನಿಸುವಂತಿಲ್ಲ. ಹೀಗಾಗಿ ಮಧ್ಯಂತರ ಆದೇಶದ ಅಗತ್ಯವಿಲ್ಲ ಎಂದು ಎಜಿ ವಾದಿಸಿದರು.