ಅಮರಾವತಿ (ಆಂಧ್ರಪ್ರದೇಶ): ಚಿಟ್ಫಂಡ್ ಗ್ರೂಪ್ಗಳ ಬಗ್ಗೆ ಚಂದಾದಾರರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚಿಸಿ ಆಂಧ್ರಪ್ರದೇಶ ಸರ್ಕಾರದ ವೆಬ್ಸೈಟ್ನಲ್ಲಿ ಜುಲೈ 30ರಂದು ಚಿಟ್ಸ್ ರಿಜಿಸ್ಟ್ರಾರ್ ಸಾರ್ವಜನಿಕ ನೋಟಿಸ್ಗಳನ್ನು ಪ್ರಕಟಿಸಿದ್ದಾರೆ. ಇದನ್ನು ಪ್ರಶ್ನಿಸಿ ಮಾರ್ಗದರ್ಶಿ ಚಿಟ್ಫಂಡ್ ಕಂಪನಿಯ ಅಧಿಕೃತ ಪ್ರತಿನಿಧಿ ಪಿ.ರಾಜಾಜಿ ಅವರು ಆಂಧ್ರಪ್ರದೇಶದ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಆಂಧ್ರದ ಗುಂಟೂರು, ಕೃಷ್ಣಾ ಮತ್ತು ಪ್ರಕಾಶಂ ಜಿಲ್ಲೆಗಳ ಚಿಟ್ ಗ್ರೂಪ್ಗಳ ಪ್ರಕರಣದಲ್ಲಿ ನೀಡಲಾದ ಸಾರ್ವಜನಿಕ ನೋಟಿಸ್ಗಳನ್ನು ಪ್ರಶ್ನಿಸಿ ಮೂರು ಅರ್ಜಿಗಳನ್ನು ಸಲ್ಲಿಸಲಾಗಿದೆ. ಸೋಮವಾರ ಕೃಷ್ಣಾ ಮತ್ತು ಪ್ರಕಾಶಂ ಜಿಲ್ಲೆಗಳ ಚಿಟ್ ಗ್ರೂಪ್ಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲರಾದ ನಾಗಮುತ್ತು ಹಾಗೂ ದಮ್ಮಲಪತಿ ಶ್ರೀನಿವಾಸ್ ವಾದ ಮಂಡಿಸಿದರು.
''ಚಿಟ್ಫಂಡ್ ಕಾಯ್ದೆ ನಿಬಂಧನೆಗಳ ಪ್ರಕಾರ, ಚಿಟ್ ನಿರ್ವಹಣೆಯಲ್ಲಿ ಯಾವುದೇ ದೋಷಗಳನ್ನು ಸರಿಪಡಿಸಲು ಫೋರ್ಮನ್ಗೆ ಅಧಿಕಾರ ಇರುತ್ತದೆ. ಚಿಟ್ ಫಂಡ್ ಶಾಖೆಗಳಲ್ಲಿ ತಪಾಸಣೆ ನಡೆಸಿದ ಸಹಾಯಕ ರಿಜಿಸ್ಟ್ರಾರ್ ಅವರಿಗೆ ವ್ಯವಹಾರದಲ್ಲಿ ದೋಷ ಕಂಡುಬಂದಲ್ಲಿ ಚಿಟ್ ಕಾಯ್ದೆಯ ಸೆಕ್ಷನ್ 46 (3)ರ ಅನ್ವಯ ಸರಿಪಡಿಸಲು ನೋಟಿಸ್ ನೀಡಬೇಕಿತ್ತು'' ಎಂದು ವಕೀಲರು ವಿವರಿಸಿದರು.
''ಇದಾದ ಮೇಲೂ ದೋಷಗಳನ್ನು ಸರಿಪಡಿಸದಿದ್ದರೆ ಸೆಕ್ಷನ್ 48 (ಹೆಚ್) ಅಡಿ ಚಿಟ್ಗ್ರೂಪ್ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬಹುದು. ಆದರೆ, ಸಹಾಯಕ ರಿಜಿಸ್ಟ್ರಾರ್ ಮೇಲ್ವಿಚಾರಕರಿಗೆ ನೋಟಿಸ್ ನೀಡಿಲ್ಲ. ಹೀಗಾಗಿ ಚಿಟ್ ಗ್ರೂಪ್ಗಳ ಅಮಾನತು ಕುರಿತು ರಿಜಿಸ್ಟ್ರಾರ್ ಅಥವಾ ಡೆಪ್ಯುಟಿ ರಿಜಿಸ್ಟ್ರಾರ್ ಆಕ್ಷೇಪಣೆ ಸ್ವೀಕರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದ್ದರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ ಚಿಟ್ಸ್ ರಿಜಿಸ್ಟ್ರಾರ್ ಪ್ರಕಟಿಸಿದ ಸಾರ್ವಜನಿಕ ನೋಟಿಸ್ ಅಮಾನ್ಯ'' ಎಂದು ವಾದಿಸಿದರು.
''ಚಿಟ್ಫಂಡ್ ಕಾಯ್ದೆ ಪ್ರಕಾರ, ಸಹಾಯಕ ರಿಜಿಸ್ಟ್ರಾರ್ ಮತ್ತು ಡೆಪ್ಯುಟಿ ರಿಜಿಸ್ಟ್ರಾರ್ ಕೂಡ ರಿಜಿಸ್ಟ್ರಾರ್ ಎಂಬ ವ್ಯಾಖ್ಯಾನದಡಿ ಬರುತ್ತಾರೆ. ಪರಿಶೀಲನೆ ನಡೆಸಿದ ಸಹಾಯಕ ನೋಂದಣಾಧಿಕಾರಿ ಮಾತ್ರ ದೋಷಗಳನ್ನು ಸರಿಪಡಿಸಲು ಮೇಲ್ವಿಚಾರಕರಿಗೆ ನೋಟಿಸ್ ನೀಡಬೇಕು. ಮತ್ತೊಂದೆಡೆ, ಸಹಾಯಕ ರಿಜಿಸ್ಟ್ರಾರ್ ಶಿಫಾರಸಿನಂತೆ ಚಿಟ್ಗ್ರೂಪ್ಗಳನ್ನು ಅಮಾನತು ಬಗ್ಗೆ ಆಕ್ಷೇಪಣೆಗಳನ್ನು ಆಹ್ವಾನಿಸುತ್ತಿರುವುದಾಗಿ ಚಿಟ್ಸ್ ರಿಜಿಸ್ಟ್ರಾರ್ ಸಾರ್ವಜನಿಕ ನೋಟಿಸ್ ನೀಡಿದ್ದಾರೆ. ನೋಟಿಸ್ ನೀಡುವುದು ರಿಜಿಸ್ಟ್ರಾರ್ ಅಧಿಕಾರದ ಪರಿಧಿಗೆ ಬರುವುದಿಲ್ಲ'' ಎಂದು ತಿಳಿಸಿದರು.
ಮುಂದುವರೆದು, ''ಚಿಟ್ ಗ್ರೂಪ್ಗಳ ಅಮಾನತಿಗೆ ಶಿಫಾರಸು ಮಾಡುವ ಅಧಿಕಾರವನ್ನು ಕಾನೂನು ನೀಡಿಲ್ಲ. ಆದರೆ, ಚಿಟ್ ಗುಂಪುಗಳನ್ನು ನಿಲ್ಲಿಸಿ ಮಾರ್ಗದರ್ಶಿಗೆ ಹಾನಿ ಮಾಡುವ ದುರುದ್ದೇಶದಿಂದಲೇ ಸಾರ್ವಜನಿಕ ನೋಟಿಸ್ ನೀಡಲಾಗಿದೆ'' ಎಂದು ವಕೀಲರು ನ್ಯಾಯಾಲಯದ ಗಮನ ಸೆಳೆದರು.