ನವದೆಹಲಿ: ಕೇಂದ್ರ ಸರಕಾರ ಆಯೋಜಿಸುತ್ತಿರುವ ಬಜೆಟ್ ನಂತರದ 12 ವೆಬಿನಾರ್‌ಗಳ ಸರಣಿಯ ನಾಲ್ಕನೇ ವೆಬಿನಾರ್‌ನಲ್ಲಿ 'ರೀಚಿಂಗ್ ದಿ ಲಾಸ್ಟ್ ಮೈಲ್' ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಾತನಾಡಿದರು. ಇಂದಿನ ವೆಬಿನಾರ್‌ನ ವಿಷಯವಾದ ಸಂತೃಪ್ತಿ ನೀತಿಯ ಹಿಂದಿನ ಚಿಂತನೆ ವಿವರಿಸಿದ ಪ್ರಧಾನಿ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ವಿಧಾನ ಮತ್ತು ಸಂತೃಪ್ತಿ ನೀತಿ ಪರಸ್ಪರ ಪೂರಕ ಎಂದು ಹೇಳಿದರು.
ದೇಶದ ಪ್ರತಿಯೊಂದು ಭಾಗದ ಪ್ರತಿಯೊಬ್ಬ ವ್ಯಕ್ತಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ನೀಡುವುದಾಗಿ ನಾವು ನಿರ್ಧರಿಸಿದ ದಿನ ಸ್ಥಳೀಯ ಮಟ್ಟದಲ್ಲಿ ಕೆಲಸದಲ್ಲಿ ತುಂಬಾ ದೊಡ್ಡ ಬದಲಾವಣೆಯನ್ನು ನಾವು ಕಾಣುತ್ತೇವೆ. ಸಂತೃಪ್ತಿ ನೀತಿಯ ಹಿಂದಿನ ಗುರಿ ಇದೇ ಆಗಿದೆ. ನಾವು ಪ್ರತಿಯೊಬ್ಬರನ್ನೂ ತಲುಪುವ ನಿರ್ಧಾರ ಮಾಡಿದಾಗ ಅಲ್ಲಿ ತಾರತಮ್ಯ ಹಾಗೂ ಭ್ರಷ್ಟಾಚಾರಕ್ಕೆ ಆಸ್ಪದವೇ ಇರಲ್ಲ. ಆಗ ಮಾತ್ರ ನಾವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ಸಾಧ್ಯ ಎಂದು ಎಂದರು.
ಈ ಹಿಂದೆ ಮೂಲ ಸೌಕರ್ಯಗಳಿಗಾಗಿ ಬಡವರು ಸರಕಾರದ ಹಿಂದೆ ಓಡುತ್ತಿದ್ದರು. ಆದರೆ ಈಗ ಸರಕಾರವೇ ಬಡವರ ಮನೆಬಾಗಿಲಿಗೆ ತಲುಪುತ್ತಿದೆ ಎಂದು ಅವರು ಹೇಳಿದರು. ವೆಬಿನಾರ್‌ಗಳನ್ನು ಆಯೋಜಿಸುವ ಹಿಂದಿನ ಉದ್ದೇಶವು ಕೇಂದ್ರ ಬಜೆಟ್ 2023 ರಲ್ಲಿ ಘೋಷಿತ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಲಹೆಗಳನ್ನು ಪಡೆಯುವುದಾಗಿದೆ. ತಮ್ಮ ಭಾಷಣದ ಆರಂಭಿಕ ಭಾಗದಲ್ಲಿ ಸಂಸತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಯ ಮಹತ್ವವನ್ನು ಒತ್ತಿ ಹೇಳಿದ ಮೋದಿ, ಸರ್ಕಾರವು ಒಂದು ಹೆಜ್ಜೆ ಮುಂದೆ ಹೋಗಿದೆ ಮತ್ತು ಕಳೆದ ಕೆಲವು ವರ್ಷಗಳಿಂದ ಬಜೆಟ್ ನಂತರ ಅದಕ್ಕೆ ಸಂಬಂಧಿಸಿದ ಎಲ್ಲರೊಂದಿಗೂ ಚರ್ಚೆ ನಡೆಸುವ ಹೊಸ ಸಂಪ್ರದಾಯವನ್ನು ಪ್ರಾರಂಭಿಸಿದೆ ಎಂದು ಹೇಳಿದರು.