ನವದೆಹಲಿ: ದೇಶದ 8 ಐಐಟಿಗಳಿಗೆ ನಿರ್ದೇಶಕರನ್ನು ನೇಮಿಸುವ ಆದೇಶಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ. ಈ ಮುಂಚೆ ನಿರ್ದೇಶಕರಾಗಿದ್ದ ಇಬ್ಬರ ಮರು ನೇಮಕಾತಿಯೂ ಇದರಲ್ಲಿ ಸೇರಿದೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.
ಎರಡು ಐಐಟಿಗಳ ನಿರ್ದೇಶಕರನ್ನು ವರ್ಗಾವಣೆ ಮಾಡಿ ಬೇರೆ ಐಐಟಿಗಳಿಗ ನೇಮಿಸಲಾಗಿದೆ. ಐಐಟಿ ಭಿಲಾಯಿ ನಿರ್ದೇಶಕ ರಜತ್ ಮೂನಾ ಐಐಟಿ ಗಾಂಧಿನಗರದ ನಿರ್ದೇಶಕರಾಗಿ ನೇಮಕಗೊಂಡಿದ್ದರೆ, ಐಐಟಿ ಧಾರವಾಡ ನಿರ್ದೇಶಕ ಪಸುಮರ್ತಿ ಶೇಷು ಐಐಟಿ ಗೋವಾದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಎರಡನೇ ಅವಧಿಗೆ ಮರು ನೇಮಕಗೊಂಡ ಇಬ್ಬರು ಐಐಟಿ ನಿರ್ದೇಶಕರೆಂದರೆ- ಕೆ.ಎನ್.ಸತ್ಯನಾರಾಯಣ (ಐಐಟಿ ತಿರುಪತಿ) ಮತ್ತು ಮನೋಜ್ ಸಿಂಗ್ ಗೌರ್ (ಐಐಟಿ ಜಮ್ಮು).
ಐಐಟಿ ಮದ್ರಾಸ್‌ನ ಪ್ರಾಧ್ಯಾಪಕರಾದ ಶೇಷಾದ್ರಿ ಶೇಖರ್ ಮತ್ತು ಶ್ರೀಪಾದ್ ಕರ್ಮಾಲ್ಕರ್ ಅವರನ್ನು ಕ್ರಮವಾಗಿ ಐಐಟಿ ಪಾಲಕ್ಕಾಡ್ ಮತ್ತು ಐಐಟಿ ಭುವನೇಶ್ವರ್‌ನ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಐಐಟಿ ಖರಗ್‌ಪುರದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವೆಂಕಯಪ್ಪಯ್ಯ ಆರ್.ದೇಸಾಯಿ ಅವರನ್ನು ಐಐಟಿ ಧಾರವಾಡದ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ಐಐಟಿ ಬಿಎಚ್‌ಯುನ ಸ್ಕೂಲ್ ಆಫ್ ಮೆಟೀರಿಯಲ್ ಸೈನ್ಸ್ ಅಂಡ್ ಟೆಕ್ನಾಲಜಿಯ ರಾಜೀವ್ ಪ್ರಕಾಶ್ ಅವರನ್ನು ಐಐಟಿ ಭಿಲಾಯ್‌ನ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ.
ಶಿಕ್ಷಣ ಸಚಿವಾಲಯ (MoE) ಕಳೆದ ವರ್ಷ ಧಾರವಾಡ, ಗೋವಾ, ಪಾಲಕ್ಕಾಡ್, ಜಮ್ಮು, ಭಿಲಾಯಿ ಮತ್ತು ತಿರುಪತಿ ಹೀಗೆ ಆರು ಹೊಸ ಐಐಟಿಗಳ ನಿರ್ದೇಶಕರ ನೇಮಕಕ್ಕೆ ಅರ್ಜಿಗಳನ್ನು ಕೋರಿತ್ತು. ಅಕ್ಟೋಬರ್ 18 ರಂದು ಪ್ರಕಟವಾದ ಜಾಹೀರಾತಿನಲ್ಲಿ ಅರ್ಜಿದಾರರು ಪಿಎಚ್‌ಡಿ ಮಾಡಿದ್ದು, ಪ್ರಥಮ ದರ್ಜೆಯಲ್ಲಿ ಪದವಿ (ಎಂಜಿನಿಯರಿಂಗ್ಗೆ ಆದ್ಯತೆ) ಪಾಸು ಮಾಡಿರಬೇಕೆಂದು ಪ್ರಕಟಿಸಲಾಗಿತ್ತು.
ಐಐಟಿ ಭುವನೇಶ್ವರ್‌ನ ನಿರ್ದೇಶಕ ಆರ್.ವಿ. ರಾಜಕುಮಾರ್ ಅವರ ಐದು ವರ್ಷಗಳ ಅಧಿಕಾರಾವಧಿ ಮುಗಿದ ನಂತರ ಏಪ್ರಿಲ್ 2020 ರಿಂದ ಪೂರ್ಣಕಾಲಿಕ ನಿರ್ದೇಶಕರನ್ನು ನೇಮಿಸಲಾಗಿಲ್ಲ.