ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ್ದ ಶಿವಸೇನೆ ಪಕ್ಷದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸ 'ಮಾತೋಶ್ರೀ' ಹೊರಡಗೆ ಹನುಮಾನ್ ಚಾಲೀಸಾ ಪಠಿಸುವ ಸವಾಲು ಪ್ರಕರಣಕ್ಕೆ ಹೊಸ ತಿರುವ ಸಿಕ್ಕಿದೆ. ಈ ಪ್ರಕರಣದ ಆರೋಪಿಗಳಾದ ಸಂಸದೆ ನವನೀತ್ ರಾಣಾ ಮತ್ತು ಶಾಸಕ ರವಿ ರಾಣಾ ದಂಪತಿ ಅವರನ್ನು ಖುಲಾಸೆಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಬಾಂಬೆ ಸೆಷನ್ಸ್ ನ್ಯಾಯಾಲಯದ ವಿಶೇಷ ಪಿಎಂಎಲ್‌ಎ ನ್ಯಾಯಾಲಯದಲ್ಲಿ ರಾಣಾ ದಂಪತಿ ಪರ ವಕೀಲ ರಿಜ್ವಾನ್ ಮರ್ಚೆಂಟ್ ಇಂದು ದೋಷಮುಕ್ತ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಎಫ್‌ಐಆರ್ ದಾಖಲಾಗದೇ ಇರುವಾಗ ಪೊಲೀಸರು ರಾಣಾ ದಂಪತಿಯನ್ನು ಸೆಕ್ಷನ್ 353 ಅಡಿ ಹೇಗೆ ಬಂಧಿಸುತ್ತಾರೆ?. ಈ ತಾಂತ್ರಿಕ ತಪ್ಪು ಪೊಲೀಸರ ನಿರ್ಲಕ್ಷ್ಯವೋ, ಇದು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪೋ ಎಂಬ ಪ್ರಶ್ನೆಯನ್ನು ಎತ್ತಲಾಗಿದೆ. ಈ ಅರ್ಜಿಗೆ ಉತ್ತರ ನೀಡುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ನ್ಯಾಯಾಲಯ ಸೂಚಿಸಿದ್ದು, ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 2ರಂದು ನಡೆಯಲಿದೆ.
ಪ್ರಕರಣದ ಹಿನ್ನೆಲೆ:ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಧ್ವನಿವರ್ಧಕಗಳ ವಿಚಾರವಾಗಿ ರಾಜಕೀಯ ತಿಕ್ಕಾಟ ನಡೆದಿತ್ತು. ಇದೇ ವಿಚಾರವಾಗಿ ಅಂದಿನ ಮಹಾ ವಿಕಾಸ್ ಆಘಾಡಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ, ಶಿವಸೇನೆ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ನಿವಾಸ 'ಮಾತೋಶ್ರೀ' ಮುಂದೆ ಅಮರಾವತಿಯ ಪಕ್ಷೇತರ ಸಂಸದೆಯಾದ ನಟಿ ನವನೀತ್ ರಾಣಾ ಮತ್ತು ಪತಿ, ಶಾಸಕ ರವಿ ರಾಣಾ ಚಾಲೀಸಾ ಪಠಿಸುವ ಸವಾಲು ಹಾಕಿದ್ದರು. ಅಂತೆಯೇ, ಏಪ್ರಿಲ್ 23ರಂದು 'ಮಾತೋಶ್ರೀ' ಬಳಿ ರಾಣಾ ದಂಪತಿ ಬಂದಿದ್ದರು. ಈ ವೇಳೆ, ದೊಡ್ಡ ಮಟ್ಟದ ಕೋಲಾಹಲ ಸೃಷ್ಟಿಯಾಗಿತ್ತು.
ನಂತರ ದೇಶದ್ರೋಹ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪ ಪ್ರಕರಣದಲ್ಲಿ ಸಂಸದೆ ನವನೀತ್ ರಾಣಾ ಮತ್ತು ಶಾಸಕ ರವಿ ರಾಣಾ ವಿರುದ್ಧ ಇಲ್ಲಿಮ ಖಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಿದ್ದರು. ಇದಾದ ನಂತರ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ರಾಣಾ ದಂಪತಿಯು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಜೈಲಿನಿಂದ ಬಿಡುಗಡೆಯಾದ ನವನೀತ್ ರಾಣಾ ಆಸ್ಪತ್ರೆಗೆ ಸೇರಿದ್ದರು. ಅಲ್ಲಿಂದ ತಮ್ಮ ಬಂಧನ ಸಂದರ್ಭದಲ್ಲಿ ಪೊಲೀಸರು ತಮ್ಮೊಂದಿಗೆ ಕೆಟ್ಟಾಗಿ ನಡೆದುಕೊಂಡಿದ್ದಾರೆ ಎಂದು ಲೋಕಸಭಾ ಸ್ಪೀಕರ್ ಓಂಬಿರ್ಲಾ ಅವರಿಗೆ ದೂರು ಸಂಸದೆ ನವನೀತ್ ರಾಣಾ ಸಹ ನೀಡಿದ್ದರು.