ಬೆಂಗಳೂರು :ಆ್ಯಪಲ್ ಪೋನ್ ತಯಾರಕ ಕಂಪನಿ ಆ್ಯಪಲ್ ಇಂಕ್ನ ಪಾಲುದಾರ ಕಂಪನಿಯಾಗಿರುವ ಫಾಕ್ಸ್ಕಾನ್ ಟೆಕ್ನಾಲಜಿ ಗ್ರೂಪ್ ಭಾರತದಲ್ಲಿ ಆ್ಯಪಲ್ ಫೋನ್ ತಯಾರಿಕಾ ಘಟಕ ಸ್ಥಾಪನೆಗೆ ಸುಮಾರು 700 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದೇ ವರದಿಯನ್ನು ಕೋಟ್ ಮಾಡಿ ಟ್ವೀಟ್ ಮಾಡಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್, ಕರ್ನಾಟಕದಲ್ಲಿ 300 ಎಕರೆ ಜಾಗದಲ್ಲಿ ಸ್ಥಾಪನೆಯಾಗಲಿರುವ ಕಾರ್ಖಾನೆಯಲ್ಲಿ ಆ್ಯಪಲ್ ಫೋನ್ಗಳನ್ನು ತಯಾರಿಸಲಾಗುವುದು ಎಂದು ಬರೆದಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಡಬಲ್ ಎಂಜಿನ್ ಸರ್ಕಾರಗಳು ಬಂಡವಾಳ ಹೂಡಿಕೆ, ಉದ್ಯೋಗ ಸೃಜನೆ ಹಾಗೂ 1 ಟ್ರಿಲಿಯನ್ ಡಾಲರ್ ಆರ್ಥಿಕತೆಗಳ ಗುರಿಗಳ ಸಾಧನೆಗೆ ಕೆಲಸ ಮಾಡುತ್ತಿವೆ ಎಂದು ಬರೆದಿದ್ದಾರೆ.
ರಾಜೀವ್ ಚಂದ್ರಶೇಖರ್ ಅವರ ಇದೇ ಟ್ವೀಟ್ ಅನ್ನು ಕೋಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆ್ಯಪಲ್ ಫೋನ್ಗಳು ಶೀಘ್ರದಲ್ಲೇ ಕರ್ನಾಟಕದಲ್ಲಿ ತಯಾರಾಗಲಿವೆ. ಇದರಿಂದ 1 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಲಿವೆ ಮಾತ್ರವಲ್ಲದೆ, ಕರ್ನಾಟಕಕ್ಕೆ ವಿಭಿನ್ನ ಅವಕಾಶಗಳ ಬಾಗಿಲು ತೆರೆಯಲಿದೆ ಎಂದು ಬರೆದಿದ್ದಾರೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ 2025ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಎಕಾನಮಿ ಮಾಡುವ ಪ್ರಯತ್ನದಲ್ಲಿ ನಾವು ನಮ್ಮ ಪಾಲಿನ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ವಿಮಾನ ನಿಲ್ದಾಣ ಬಳಿ ಹೊಸ ಘಟಕ ಸ್ಥಾಪನೆ ಸಾಧ್ಯತೆ: ಕರ್ನಾಟಕದಲ್ಲಿ ಫಾಕ್ಸ್ಕಾನ್ ಆ್ಯಪಲ್ ಫೋನ್ ತಯಾರಿಕಾ ಘಟಕ ಸ್ಥಾಪಿಸುವ ಬಗ್ಗೆ ಪ್ರಕಟ ವರದಿಯ ಪ್ರಕಾರ, ತೈವಾನ್ ಕಂಪನಿಯಾಗಿರುವ ಹಾಗೂ ತನ್ನ ಅಂಗಸಂಸ್ಥೆ ಹೋನ್ ಹಾಯ್ ಪ್ರಿಸಿಶನ್ ಇಂಡಸ್ಟ್ರಿ ಕಂಪನಿ ಹೆಸರಿನಿಂದ ಪ್ರಖ್ಯಾತವಾಗಿರುವ ಫಾಕ್ಸ್ಕಾನ್, ಬೆಂಗಳೂರಿನ ವಿಮಾನ ನಿಲ್ದಾಣ ಬಳಿ 300 ಎಕರೆ ಜಾಗದಲ್ಲಿ ಆ್ಯಪಲ್ ಐಫೋನ್ ಬಿಡಿಭಾಗಗಳನ್ನು ತಯಾರಿಸುವ ಘಟಕ ಸ್ಥಾಪಿಸಲಿದೆ ಎಂದು ತಿಳಿಸಲಾಗಿದೆ. ಈ ಘಟಕದಲ್ಲಿ ಆ್ಯಪಲ್ ಬಿಡಿಭಾಗಗಳನ್ನು ತಯಾರಿಸುವುದು ಹಾಗೂ ಆ್ಯಪಲ್ ಪೋನ್ಗಳನ್ನು ಅಸೆಂಬಲ್ ಕೂಡ ಮಾಡಲಾಗುವುದು. ಅಲ್ಲದೆ ಆ್ಯಪಲ್ನ ಹೊಸ ಎಲೆಕ್ಟ್ರಿಕ್ ವೆಹಿಕಲ್ ಗಳ ಕೆಲ ಭಾಗಗಳನ್ನು ಇಲ್ಲಿ ತಯಾರಿಸುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ ವರದಿಯಲ್ಲಿ ಹೇಳಲಾಗಿದೆ.
ಚೀನಾದಿಂದ ಭಾರತದತ್ತ ಬಂಡವಾಳ ಹರಿವು: ಈ ಬಂಡವಾಳ ಹೂಡಿಕೆಯು ಭಾರತದಲ್ಲಿ ಫಾಕ್ಸ್ಕಾನ್ನ ಈವರೆಗಿನ ಅತಿದೊಡ್ಡ ಹೂಡಿಕೆಯಾಗಲಿದೆ. ವಿಶ್ವದ ಅತಿದೊಡ್ಡ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಮಾರುಕಟ್ಟೆಯಾಗಿರುವ ಚೀನಾ ನಿಧಾನವಾಗಿ ಆ ಸ್ಥಾನ ಕಳೆದುಕೊಳ್ಳುತ್ತಿದೆ ಎಂಬ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ನೋಡಲಾಗುತ್ತಿದೆ. ಫಾಕ್ಸ್ಕಾನ್ನ ಉದ್ದೇಶಿತ ಭಾರತದ ಹೊಸ ಘಟಕವು ಸುಮಾರು 1 ಲಕ್ಷ ಉದ್ಯೋಗ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಸದ್ಯ ಚೀನಾದ ಝೆಂಗಝೊ ನಲ್ಲಿರುವ ಈ ಘಟಕದಲ್ಲಿ ಸುಮಾರು 2 ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: iPhone ನಿಂದ ಚಿತ್ರೀಕರಣಗೊಂಡ ಫಿಲಂ 'ಫುರಸತ್': ಆ್ಯಪಲ್ ಸಿಇಒ ಟಿಮ್ ಕುಕ್ ಶ್ಲಾಘನೆ