ಸ್ಯಾನ್ ಫ್ರಾನ್ಸಿಸ್ಕೋ: ಸೃಜನಾತ್ಮಕ ಬುದ್ದಿಮತ್ತೆ ಮತ್ತು ಸಹಯೋಗಕ್ಕಾಗಿ ವಿನ್ಯಾಸಗೊಳಿಸಲಾದ ಫ್ರೀಫಾರ್ಮ್ ಎಂಬ ಹೊಸ ವೈಟ್‌ಬೋರ್ಡ್ ಅಪ್ಲಿಕೇಶನ್ ಅನ್ನು (whiteboard application called Freeform) ಆ್ಯಪಲ್ ಬಿಡುಗಡೆ ಮಾಡಿದೆ. ಹೊಸ ಫ್ರೀಫಾರ್ಮ್ ವೈಟ್‌ಬೋರ್ಡ್ ಅಪ್ಲಿಕೇಶನ್ ಫ್ಲೆಕ್ಸಿಬಲ್ ಕ್ಯಾನ್ವಾಸ್‌ನಲ್ಲಿ ಕಂಟೆಂಟ್ ಅನ್ನು ವ್ಯವಸ್ಥಿತವಾಗಿ ಇಡಲು ಮತ್ತು ವೀಕ್ಷಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇದರಿಂದ ಕಂಟೆಂಟ್ ಅನ್ನು ಒಂದೇ ಸ್ಥಳದಲ್ಲಿ ವೀಕ್ಷಿಸಲು, ಶೇರ್ ಮಾಡಲು ಮತ್ತು ಬಳಸಲು ಸಾಧ್ಯವಾಗುತ್ತದೆ ಎಂದು ಜಾಗತಿಕ ತಂತ್ರಜ್ಞಾನ ಕಂಪನಿ ಆ್ಯಪಲ್ ಮಂಗಳವಾರ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.
ಬೋರ್ಡ್‌ನಲ್ಲಿ ಒಟ್ಟಿಗೆ ಕೆಲಸ ಮಾಡಲು ಇತರರನ್ನು ಆಹ್ವಾನಿಸಲು ಅಪ್ಲಿಕೇಶನ್ ಬಳಕೆದಾರರಿಗೆ ಅವಕಾಶ ನೀಡುತ್ತದೆ. ಅಲ್ಲದೇ ಎಲ್ಲರೂ ಫೇಸ್‌ಟೈಮ್ ಕರೆಗಳ ಸಮಯದಲ್ಲಿ ಸಹ ಇದನ್ನು ಬಳಸಬಹುದು. ಫ್ರೀಫಾರ್ಮ್ ಬೋರ್ಡ್‌ಗಳನ್ನು ಐಕ್ಲೌಡ್‌ನಲ್ಲಿ ಸಂಗ್ರಹಿಸಲಾಗುವುದರಿಂದ ಬಳಕೆದಾರರು ಇವನ್ನು ವಿವಿಧ ಡಿವೈಸ್ಗಳ ಮೂಲಕ ಸಿಂಕ್ ಮಾಡಬಹುದು.
ಫ್ರೀಫಾರ್ಮ್ ಐಫೋನ್, ಐಪ್ಯಾಡ್ ಮತ್ತು ಮ್ಯಾಕ್ ಬಳಕೆದಾರರಿಗೆ ಬಹು ವಿಶಾಲವಾದ ಬಳಖೆಯ ಸಾಧ್ಯತೆಗಳನ್ನು ನೀಡುತ್ತದೆ ಎಂದು ವಿಶ್ವಾದ್ಯಂತ ಆ್ಯಪಲ್ ಉತ್ಪನ್ನ ಮಾರ್ಕೆಟಿಂಗ್‌ನ ಉಪಾಧ್ಯಕ್ಷ ಬಾಬ್ ಬೋರ್ಚರ್ಸ್ ಹೇಳಿದರು. ಮುಗಿಯಲಾರದಷ್ಟು ಕ್ಯಾನ್ವಾಸ್‌ಗಳೊಂದಿಗೆ, ವ್ಯಾಪಕ ಶ್ರೇಣಿಯ ಫೈಲ್‌ಗಳನ್ನು ಅಪ್‌ಲೋಡ್ ಮಾಡಲು ಬೆಂಬಲ, ಐಕ್ಲೌಡ್ (iCloud) ಏಕೀಕರಣ ಮತ್ತು ಬಳಕೆಯ ಸಾಮರ್ಥ್ಯಗಳು, ಫ್ರೀಫಾರ್ಮ್ ಬುದ್ದಿಮತ್ತೆಗಾಗಿ ಹಂಚಿಕೆಯ ಸ್ಥಳವನ್ನು ಸೃಷ್ಟಿಸುತ್ತದೆ.