ನವದೆಹಲಿ: ಕಳೆದ ತಿಂಗಳು ಕತಾರ್ ನ್ಯಾಯಾಲಯವು ಎಂಟು ಮಂದಿ ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಗೆ ಮರಣದಂಡನೆ ವಿಧಿಸಿದ್ದು, ತೀರ್ಪು ಮರುಪರಿಶೀಲಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಮಂಗಳವಾರ ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಬಂಧಿತ ಭಾರತೀಯರಿಗೆ ಮತ್ತೊಮ್ಮೆ ಕಾನ್ಸುಲರ್ ಪ್ರವೇಶ ನೀಡಲಾಗಿದೆ. ಭಾರತವು ಅವರಿಗೆ ಎಲ್ಲಾ ಕಾನೂನು ಮತ್ತು ರಾಜತಾಂತ್ರಿಕ ನೆರವು ನೀಡುವುದನ್ನು ಮುಂದುವರಿಸುತ್ತದೆ ಎಂದರು.
ಅಕ್ಟೋಬರ್ 26ರಂದು ಕತಾರ್‌ನ 'ಕೋರ್ಟ್ ಆಫ್ ಫಸ್ಟ್ ಇನ್‌ಸ್ಟಾನ್ಸ್' (ಕತಾರ್‌ನ ಪ್ರಥಮ ಹಂತದ ನ್ಯಾಯಾಲಯ) ಎಂಟು ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಗೆ ಮರಣದಂಡನೆ ವಿಧಿಸಿತ್ತು. ಭಾರತವು ಈ ನಿರ್ಧಾರಕ್ಕೆ ಆಘಾತ ವ್ಯಕ್ತಪಡಿಸಿತ್ತು. ಈ ವಿಷಯದಲ್ಲಿ ಎಲ್ಲಾ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗುವುದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಬಾಗ್ಚಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಖಾಸಗಿ ಕಂಪನಿ 'ಅಲ್ ದಹ್ರಾ' ಜೊತೆ ಕೆಲಸ ಮಾಡುತ್ತಿರುವ ಈ ಭಾರತೀಯ ನಾಗರಿಕರನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿ ಬೇಹುಗಾರಿಕೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಭಾರತೀಯ ಪ್ರಜೆಗಳ ವಿರುದ್ಧದ ಆರೋಪಗಳನ್ನು ಕತಾರ್ ಅಥವಾ ಭಾರತೀಯ ಅಧಿಕಾರಿಗಳು ಬಹಿರಂಗ ಮಾಡಿರಲಿಲ್ಲ. ಮಾರ್ಚ್ 25ರಂದು ಎಂಟು ಭಾರತೀಯ ನೌಕಾಪಡೆಯ ಅನುಭವಿಗಳ ವಿರುದ್ಧ ಆರೋಪಗಳನ್ನು ದಾಖಲಿಸಲಾಯಿತು. ಬಳಿಕ ಅವರನ್ನು ಕತಾರ್ ಕಾನೂನಿನ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಈ ಎಲ್ಲಾ ಮಾಜಿ ನೌಕಾಪಡೆಯ ಅಧಿಕಾರಿಗಳು ಭಾರತೀಯ ನೌಕಾಪಡೆಯಲ್ಲಿ 20 ವರ್ಷಗಳವರೆಗೆ ಬೋಧಕರು (ತರಬೇತಿ ನೀಡುವುದು) ಒಳಗೊಂಡಂತೆ ಪ್ರಮುಖ ಹುದ್ದೆಗಳನ್ನು ಹೊಂದಿದ್ದರು ಎಂದು ಮಾಜಿ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷೆಗೊಳಗಾದವರ ವಿವರ: ಭಾರತೀಯ ನೌಕಾಪಡೆಯ ಮಾಜಿ ಕ್ಯಾಪ್ಟನ್ಗಳಾದ ಸೌರಭ್ ವಶಿಷ್ಟ್, ನವತೇಜ್ ಸಿಂಗ್ ಗಿಲ್, ಹಿರಿಯ ದರ್ಜೆಯ ಮಾಜಿ ಅಧಿಕಾರಿಗಳಾದ ಪೂರ್ಣೇಂದು ತಿವಾರಿ, ಬೀರೇಂದ್ರ ಕುಮಾರ್ ವರ್ಮಾ, ಸುಗ್ನಾಕರ್ ಪಕಲಾ, ಅಮಿತ್ ನಾಗ್ಪಾಲ್, ಸಂಜೀವ್ ಗುಪ್ತಾ ಮತ್ತು ಸೈಲರ್ ರಾಗೇಶ್ ಶಿಕ್ಷೆಗೆ ಗುರಿಯಾಗಿದ್ದವರು. ಈ ಎಂಟು ಮಂದಿಯ ಕುಟುಂಬಗಳು ಅವರ ಬಗ್ಗೆ ಚಿಂತಿತರಾಗಿದ್ದಾರೆ.
ಇದನ್ನೂ ಓದಿ:ಕತಾರ್ ಜೈಲಿನಲ್ಲಿದ್ದಾರೆ ಎಂಟು ಜನ ಭಾರತೀಯ ನೌಕಾಪಡೆಯ ಮಾಜಿ ಸಿಬ್ಬಂದಿ : ಭವಿಷ್ಯದ ಬಗ್ಗೆ ಆತಂಕ