ತಿರುಪತಿ(ಆಂಧ್ರಪ್ರದೇಶ): ಭಕ್ತರಿಗೆ ಎಲ್ಲ ರೀತಿಯ ಸೇವೆಗಳನ್ನು ಒದಗಿಸಲು ಟಿಟಿಡಿ ಪ್ರಯತ್ನಗಳನ್ನು ಮಾಡುತ್ತಿದ್ದು, ಅದರ ಭಾಗವಾಗಿ, ಭಕ್ತರಿಗೆ ವಿಶೇಷ ಟಿಟಿ ದೇವಸ್ಥಾನಂ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಆ್ಯಪ್‌ನಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ವಿವರಿಸಿದರು. ತಿರುಮಲ ಭಕ್ತರಿಗೆ ಉತ್ತಮ ಮತ್ತು ಸುಲಭ ಸೇವೆಗಳನ್ನು ಒದಗಿಸಲು ತಿರುಮಲ ತಿರುಪತಿ ದೇವಸ್ಥಾನಂ ಅಪ್ಲಿಕೇಶನ್ ಸಿದ್ದಪಡಿಸಿದೆ.
ಈ ಅಪ್ಲಿಕೇಶನ್ ಅನ್ನು ಜಿಯೋ ಕಂಪನಿ ಅಭಿವೃದ್ಧಿಪಡಿಸಿದೆ. ಇದರಲ್ಲಿ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಆ್ಯಪ್ನ್ನು ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ ಅನ್ನಮಯ್ಯ ಕಟ್ಟಡದಲ್ಲಿ ಉದ್ಘಾಟಿಸಿದರು. ಈ ಅಪ್ಲಿಕೇಶನ್ ಮೂಲಕ ತಿರುಮಲದಲ್ಲಿ ಆಯೋಜಿಸಲಾದ ಪ್ರತಿಯೊಂದು ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುವುದು ಮತ್ತು ಭಕ್ತರು ನೇರ ಪ್ರಸಾರವನ್ನು ಈ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು ಎಂದು ತಿಳಿಸಿದರು.
ವರ್ಚುಯಲ್ ಸೇವೆಗಳನ್ನು ಬುಕ್ ಮಾಡಬಹುದು:ಎಸ್ವಿಬಿಸಿ ಭಕ್ತಿ ಚಾನೆಲ್ ನಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಸಹ ಇದರಲ್ಲಿ ಲಭ್ಯವಿರುತ್ತವೆ. ಈ ಆ್ಯಪ್ ಬಳಸಿ ಭಕ್ತರು ದರ್ಶನ ಟಿಕೆಟ್, ಕೊಠಡಿಗಳು ಮತ್ತು ಸೇವಾ ಟಿಕೆಟ್ ಗಳನ್ನು ಪಡೆಯಬಹುದು. ಈ ಅಪ್ಲಿಕೇಶನ್‌ನಲ್ಲಿ ವರ್ಚುಯಲ್ ಸೇವೆಗಳನ್ನು ಸಹ ಬುಕ್ ಮಾಡಬಹುದು. ದೇವಾಲಯದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವೂ ಗ್ಯಾಲರಿಯಲ್ಲಿರುವ ಆ್ಯಪ್ ನಲ್ಲಿ ಲಭ್ಯವಿರುತ್ತದೆ ಎಂದು ಅವರು ಹೇಳಿದರು. ತಿರುಮಲದ ಇತಿಹಾಸವೂ ಈ ಗ್ಯಾಲರಿಯಲ್ಲಿದೆ ಎಂದು ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ ವಿವರಿಸಿದರು.
ಡಿಜಿಟಲ್ ಗೇಟ್‌ವೇ ಆಗಿ ಬಳಸಬಹುದು: ಭಕ್ತರು ಎಲ್ಲ ಅಗತ್ಯತೆಗಳಿಗೆ ಈ ಆ್ಯಪ್ ಅನ್ನು ಡಿಜಿಟಲ್ ಗೇಟ್‌ವೇ ಆಗಿ ಬಳಸಬಹುದು ಎಂದು ಟಿಟಿಡಿ ಇಒ ಎವಿ ಧರ್ಮ ರೆಡ್ಡಿ ಹೇಳಿದರು. ಭಕ್ತರು ಯಾವುದೇ ಪಾಸ್ ವರ್ಡ್ ಇಲ್ಲದೇ ಲಾಗ್ ಇನ್ ಆಗಲು ಯೂಸರ್ ನೇಮ್ ಮತ್ತು ಒಟಿಪಿ ನಮೂದಿಸಬೇಕು ಎಂದು ಹೇಳಿದರು. ಆ್ಯಪ್ ಅನ್ನು ಕಡಿಮೆ ಸಂಕೀರ್ಣತೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ ಮತ್ತು ಎಲ್ಲ ವಯಸ್ಸಿನ ಜನರು ಇದನ್ನು ಸುಲಭವಾಗಿ ಬಳಸಬಹುದು ಎಂದು ಅವರು ಹೇಳಿದರು.