ನವದೆಹಲಿ:ರಾಜ್ಯಸಭಾ ಸಭಾಪತಿ ಹಾಗೂ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಭೇಟಿಯಾಗಿ ಆಯ್ಕೆ ಸಮಿತಿ ವಿವಾದಕ್ಕೆ ಸಂಬಂಧಿಸಿದಂತೆ ಬೇಷರತ್ ಕ್ಷಮೆಯಾಚಿಸುವಂತೆ ಆಪ್ ಸಂಸದ ರಾಘವ್ ಚಡ್ಡಾ ಅವರಿಗೆ ಸುಪ್ರೀಂಕೋರ್ಟ್ ಶುಕ್ರವಾರ ಸೂಚಿಸಿದೆ.
ಸಂಸದ ರಾಘವ್ ಚಡ್ಡಾ ಅವರನ್ನು ಸದನದಿಂದ ಅನಿರ್ಧಿಷ್ಟಾವಧಿಗೆ ಅಮಾನತುಗೊಳಿಸಿರುವ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಾಜ್ಯಸಭೆ ಸದನದ ವೇಳೆ ಗೊಂದಲ ಸೃಷ್ಟಿಸಿರುವ ಬಗ್ಗೆ ನೀವು ಸಭಾಪತಿಯವರಲ್ಲಿ ಕ್ಷಮೆಯಾಚಿಸಬೇಕು. ಇದು ಸದನ ಹಾಗೂ ಉಪ ರಾಷ್ಟ್ರಪತಿ ಅವರ ಘನತೆಯನ್ನು ಒಳಗೊಂಡಿರುವ ಕಾರಣ ತುಂಬಾ ಗಂಭೀರ ವಿಷಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಜೊತೆಗೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು, ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರು ಕೂಡ ರಾಘವ್ ಚಡ್ಡಾ ಅವರ ಕ್ಷಮೆಯನ್ನು ಸಹಾನುಭೂತಿಯಿಂದ ಪರಿಗಣಿಸಬೇಕು ಎಂದು ತಿಳಿಸಿದರು. ರಾಘವ್ ಚಡ್ಡಾ ಪರ ವಕೀಲ ಶದನ್ ಫರಾಸತ್ ಅವರು, ತಮ್ಮ ಕಕ್ಷಿದಾರ ರಾಘವ್ ಚಡ್ಡಾ ರಾಜ್ಯಸಭೆಯಲ್ಲಿ ಅತ್ಯಂತ ಕಿರಿಯರು. ಕ್ಷಮೆ ಯಾಚಿಸಲು ಅವರಿಗೆ ಯಾವುದೇ ಹಿಂಜರಿಕೆ ಇಲ್ಲ. ಈ ಹಿಂದೆಯೇ ಅವರು ಕ್ಷಮೆ ಯಾಚಿಸಲು ಸಿದ್ಧರಾಗಿದ್ದರು ಎಂದು ಹೇಳಿದರು.
ಆಗಸ್ಟ್ 11 ರಂದು ಮುಂಗಾರು ಅಧಿವೇಶನದ ಸಂದರ್ಭದಲ್ಲಿ ವಿಶೇಷ ಹಕ್ಕು ಉಲ್ಲಂಘನೆಯ ಆರೋಪದ ಮೇಲೆ ಚಡ್ಡಾ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು. ತಮ್ಮ ಅನುಮತಿ ಇಲ್ಲದೇ ಸದನದ ಸಮಿತಿಯೊಂದರಲ್ಲಿ ತಮ್ಮನ್ನು ಸೇರ್ಪಡೆಗೊಳಿಸಲು ರಾಘವ್ ಚಡ್ಡಾ ಅವರು ಉದ್ದೇಶಿಸಿದ್ದರು ಎಂದು ಐವರು ಸಂಸದರು ಆರೋಪಿಸಿದ್ದರು. ಇದರ ಆಧಾರದ ಮೇಲೆ ಸದನದ ನಾಯಕ ಪೀಯೂಶ್ ಗೋಯಲ್ ಅವರು ರಾಘವ್ ಚಡ್ಡಾ ಅವರನ್ನು ಅನಿರ್ಧಿಷ್ಟಾವಧಿಗೆ ಅಮಾನತುಗೊಳಿಸುವ ನಿರ್ಣಯವನ್ನು ಮಂಡಿಸಿದ್ದರು. ಆ ನಿರ್ಣಯವನ್ನು ಮೇಲ್ಮನೆ ಧ್ವನಿಮತದಿಂದ ಅಂಗೀಕರಿಸಿತ್ತು.
ರಾಜ್ಯಸಭೆಯಿಂದ ತಮ್ಮನ್ನು ಅಮಾನತುಗೊಳಿಸಿರುವುದನ್ನು ರಾಘವ್ ಚಡ್ಡಾ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಅಕ್ಟೋಬರ್ 30 ರಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ರಾಘವ್ ಚಡ್ಡಾ ಅಮಾನತು ಕುರಿತ ಅರ್ಜಿ ವಿಚಾರಣೆ ನಡೆಸಿತ್ತು. ಈ ವೇಳೆ, ಸಂಸದ ರಾಘವ್ ಚಡ್ಡ ಆವರನ್ನು ರಾಜ್ಯಸಭೆಯಿಂದ ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿರುವುದು ಗಂಭೀರ ಕಳವಳದ ಸಂಗತಿಯಾಗಿದೆ. ಈಗಾಗಲೇ 75 ದಿನಗಳು ಕಳೆದಿದ್ದು, ರಾಘವ ಅವರು ಆಡಳಿತ ಪಕ್ಷ ಪ್ರತಿನಿಧಿಸುವ ಧ್ವನಿಗಿಂತ ಭಿನ್ನ ಧ್ವನಿಯನ್ನು ಪ್ರತಿನಿಧಿಸುವವರಾಗಿದ್ದಾರೆ ಎಂದು ಹೇಳಿ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತ್ತು.
ಇದನ್ನೂ ಓದಿ :'ಅಮಾನತುಗೊಳಿಸಿದ ಸಂಸದ' ಎಂದು ಟ್ವಿಟರ್ ಬಯೋ ಬದಲಾಯಿಸಿದ ರಾಘವ್ ಚಡ್ಡಾ