ನವದೆಹಲಿ:ದೆಹಲಿಅಪೊಲೊ ಆಸ್ಪತ್ರೆಯ ಮೇಲೆ ಕಿಡ್ನಿ ವ್ಯಾಪಾರದ ಆರೋಪ ಕೇಳಿಬಂದಿದೆ. ಆಸ್ಪತ್ರೆಯಲ್ಲಿ ಹಣಕ್ಕಾಗಿ ಕಿಡ್ನಿ ವ್ಯಾಪಾರ ನಡೆಸಲಾಗುತ್ತಿದೆ ಎಂದು ವಿದೇಶಿ ಪತ್ರಿಕೆಯೊಂದು ವರದಿ ಮಾಡಿದೆ. ಈ ಆರೋಪವನ್ನು ಅಪೊಲೊ ಆಡಳಿತ ಮಂಡಳಿ ತಳ್ಳಿಹಾಕಿದೆ. ಈ ಮಧ್ಯೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಅಂಗಾಂಶ ಕಸಿ ಸಂಸ್ಥೆ ತನಿಖೆಗೆ ಆದೇಶಿಸಿದೆ.
ಪ್ರಮುಖ ವಿದ್ಯಮಾನವೊಂದರಲ್ಲಿ ಆಸ್ಪತ್ರೆಯು ಮ್ಯಾನ್ಮಾರ್ ಕಾರ್ಯಾಚರಣೆಯ ಮುಖ್ಯಸ್ಥರನ್ನು ಅಮಾನತುಗೊಳಿಸಿದೆ. ಪತ್ರಿಕೆ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಇವರು ಹಣಕ್ಕಾಗಿ ಮೂತ್ರಪಿಂಡ ಕಸಿ ಮಾಡಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಇದು ವಿವಾದದ ಕಿಡಿ ಹೊತ್ತಿಸಿದೆ.
ಆಸ್ಪತ್ರೆಯ ವಿರುದ್ಧದ ಆರೋಪವೇನು?:ದೆಹಲಿಯ ಅಪೊಲೊ ಆಸ್ಪತ್ರೆಯಲ್ಲಿ ಮ್ಯಾನ್ಮಾರ್ ಬಡ ಜನರನ್ನು ಕರೆತಂದು ಅವರ ಕಿಡ್ನಿಗಳನ್ನು ಹಣಕ್ಕೆ ಪಡೆದು, ಅವನ್ನು ಸಿರಿವಂತ ವ್ಯಕ್ತಿಗಳಿಗೆ ಕಸಿ ಮಾಡಲಾಗುತ್ತಿದೆ. ಇಲ್ಲಿನ ವೈದ್ಯರು ಇದಕ್ಕೆ ಸಾಥ್ ನೀಡಿದ್ದಾರೆ. ಬಡವರಿಗೆ ಅಂಗಾಂಗಗಳನ್ನು ಮಾರಾಟ ಮಾಡಲು ಹಣದ ಆಮಿಷ ಒಡ್ಡಲಾಗುತ್ತಿದೆ. ಈ ಚಟುವಟಿಕೆಗಳು ಆರ್ಥಿಕವಾಗಿ ದುರ್ಬಲವಾಗಿರುವ ವ್ಯಕ್ತಿಗಳ ಮೇಲೆ ದುಷ್ಪರಿಣಾಮ ಉಂಟು ಮಾಡಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜೊತೆಗೆ ವರದಿಯಲ್ಲಿ ಕಿಡ್ನಿ ಮಾರಿಕೊಂಡ ಮ್ಯಾನ್ಮಾರ್ ವ್ಯಕ್ತಿಯ ಹೇಳಿಕೆಯನ್ನೂ ನಮೂದಿಸಲಾಗಿದೆ. 58 ವರ್ಷದ ವ್ಯಕ್ತಿ 2022 ರ ಸೆಪ್ಟೆಂಬರ್ನಲ್ಲಿ ತನ್ನ ಒಂದು ಮೂತ್ರಪಿಂಡವನ್ನು ಮಾರಾಟ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಅದಕ್ಕೆ ಪ್ರತಿಯಾಗಿ ಅವರು ಹಣ ನೀಡಿದ್ದಾರೆ. ಇದು ದೆಹಲಿಯ ಅಪೋಲೊ ಆಸ್ಪತ್ರೆಯಲ್ಲಿ ನಡೆದಿದೆ ಎಂದೂ ವರದಿ ಹೇಳಿದೆ. ಮೂತ್ರಪಿಂಡ ದಾನ ಮಾಡುವ ವ್ಯಕ್ತಿ ಯಾರೆಂಬುದು ರೋಗಿಗೆ ತಿಳಿದಿರುವುದಿಲ್ಲ. ಹೀಗೆ ಮೂತ್ರಪಿಂಡಗಳನ್ನು ಮ್ಯಾನ್ಮಾರ್‌ನ ಬಡವರಿಂದ ಖರೀದಿಸಲಾಗುತ್ತದೆ. ಅವನ್ನು ಭಾರತದ ಶ್ರೀಮಂತ ರೋಗಿಗಳಿಗೆ ಕಸಿ ಮಾಡಲು ಬಳಸಲಾಗುತ್ತದೆ ಎಂದು ಆರೋಪಿಸಿ ಪತ್ರಿಕೆ ವರದಿ ಮಾಡಿದೆ.