ನವದೆಹಲಿ: ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಕೆಲವೇ ದಿನಗಳಲ್ಲಿ ಎಸ್ಪಿಗೆ ಅಲ್ಪ ಹಿನ್ನಡೆಯಾಗಿದೆ. ಸಮಾಜವಾದಿ ಪಕ್ಷದ ಸರ್ವೋಚ್ಚ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಇಂದು ಬಿಜೆಪಿ ಸೇರಿದ್ದಾರೆ.
SP ವರಿಷ್ಠ ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರ್ಪಡೆ ಯುಪಿ ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ ಮತ್ತು ಪಕ್ಷದ ನಾಯಕ ಸ್ವತಂತ್ರ ದೇವ್ ಸಿಂಗ್ ಅವರು ಅಪರ್ಣಾಗೆ ಬಿಜೆಪಿ ಸದಸ್ಯತ್ವ ನೀಡಿ ಬರಮಾಡಿಕೊಂಡರು. ಬಳಿಕ ಮಾತನಾಡಿರುವ ಅಪರ್ಣಾ ಯಾದವ್, ಪ್ರಧಾನಿ ಮೋದಿಯವರ ಕಾರ್ಯಶೈಲಿಯಿಂದ ಪ್ರಭಾವಿತಳಾಗಿದ್ದೇನೆ. ನನಗೆ ಎಲ್ಲಕ್ಕಿಂತ ಮಿಗಿಲಾದದ್ದು ರಾಷ್ಟ್ರಧರ್ಮ ಎಂದು ಹೇಳಿದ್ದಾರೆ.
ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಮಾತನಾಡಿ, ಅಪರ್ಣಾ ಯಾದವ್ ಅವರು ಈ ಹಿಂದೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ರೀತಿ ನೋಡಿದಾಗ ಅವರು ಭಾರತೀಯ ಜನತಾ ಪಕ್ಷ ಕುಟುಂಬದ ಭಾಗವಾಗಬಹುದೆಂದು ತೋರುತ್ತಿತ್ತು. ಇದೀಗ ಅವರು ಬಿಜೆಪಿಗೆ ಬಂದಿದ್ದಾರೆ ಎಂದರು.
ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಅಪರ್ಣಾ ಯಾದವ್ ಅವರು ನರೇಂದ್ರ ಮೋದಿ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ ಹಾಗೂ ರಾಜ್ಯಾಧ್ಯಕ್ಷ ಸ್ವತಂತ್ರದೇವ್ ಸಿಂಗ್ ಅವರಿಗೆ ಧನ್ಯವಾದ ಸಲ್ಲಿಸಿದರು. ಇವರಿಗೆ ಈ ಭಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಇದೆ.
ಅಪರ್ಣಾ ಯಾದವ್ ಅವರು 2017 ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಲಖನೌ ಕ್ಯಾಂಟ್‌ನಿಂದ ಸ್ಪರ್ಧಿಸಿ ಬಿಜೆಪಿಯ ರೀಟಾ ಬಹುಗುಣ ಜೋಶಿ ವಿರುದ್ಧ ಸೋಲು ಅನುಭವಿಸಿದ್ದರು. ಇದೀಗ ಅಪರ್ಣಾಗೆ ಬಿಜೆಪಿ ಟಿಕೆಟ್ ನೀಡಿಲಿದೆ ಎಂಬ ಮಾತುಗಳು ಕೇಳಿ ಬಂದಿವೆ.