ತಿರುಪತಿ(ಆಂಧ್ರಪ್ರದೇಶ):ತಮ್ಮನ ವಿವಾಹೇತರ ಸಂಬಂಧ ವಿವಾದವನ್ನು ಬಗೆಹರಿಸಲು ಹೋದ ಅಣ್ಣನನ್ನು ಜೀವಂತವಾಗಿ ದಹಿಸಿದ ದಾರುಣ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಹತ್ಯೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ನಾಗರಾಜು ಮೃತ ವ್ಯಕ್ತಿ. ಚಿತ್ತೂರು ಜಿಲ್ಲೆಯ ವೆದೂರು ಕುಪ್ಪಂ ಮಂಡಲದ ಬ್ರಾಹ್ಮಣಪಲ್ಲಿ ಗ್ರಾಮಕ್ಕೆ ಸೇರಿದವರಾಗಿದ್ದಾರೆ.
ಘಟನೆಯ ಹಿನ್ನೆಲೆ:ಮೃತ ನಾಗರಾಜು ಅವರ ಸಹೋದರ ಪುರುಷೋತ್ತಮ್ ಗ್ರಾಮದ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ಆರೋಪವಿತ್ತು. ಇದೇ ಕಾರಣಕ್ಕಾಗಿ ಜಗಳವೂ ನಡೆದಿತ್ತು. ಇದನ್ನು ಬಗೆಹರಿಸಲು ಅಣ್ಣ ನಾಗರಾಜು ಹಲವು ಬಾರಿ ಪ್ರಯತ್ನಿಸಿದ್ದ. ಈ ಮಧ್ಯೆ ತಮ್ಮನ ಪ್ರಾಣಕ್ಕೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಆತನನ್ನು ಊರಿನಿಂದ ಬೆಂಗಳೂರಿಗೆ ಕರೆತಂದಿದ್ದ. ಇದು ಮಹಿಳೆಯ ಕುಟುಂಬಸ್ಥರಿಗೆ ಕೋಪ ತರಿಸಿತ್ತು.
ಇದನ್ನೇ ನೆಪವಾಗಿಟ್ಟುಕೊಂಡ ಮಹಿಳೆ ಕುಟುಂಬಸ್ಥರು, ನಾಗರಾಜು ಜೊತೆಗೆ ಸಂಧಾನ ನಡೆಸಲು ಊರಿಗೆ ಬರುವಂತೆ ಕರೆದಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ನಾಗರಾಜು ತನ್ನ ಊರಿಗೆ ಬಂದಿದ್ದ. ಈ ವೇಳೆ, ಮಹಿಳೆಯ ಕುಟುಂಬಸ್ಥರು ಆತನ ಮೇಲೆ ಹಲ್ಲೆ ಮಾಡಿ ಕಾರಿನಲ್ಲಿ ಜೀವಂತವಾಗಿ ಸುಟ್ಟು ಹಾಕಿದ್ದಾರೆ ಎಂದು ಹೇಳಲಾಗಿದೆ.
ಸಂಧಾನಕ್ಕೆ ಬಂದಾಗ ದಹಿಸಿದ ಆರೋಪ:ತಮ್ಮನ ವಿವಾಹೇತರ ಸಂಬಂಧವನ್ನು ಬಗೆಹರಿಸಲು ಬಂದ ವೇಳೆ ನಡೆದ ಗಲಾಟೆಯಲ್ಲಿ ನಾಗರಾಜುನ್ನು ಅವರ ಹೋಂಡಾ ಕಾರಿನಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಲಾಗಿದೆ. ಗ್ರಾಮದ ಹೊರಭಾಗದಲ್ಲಿ ಕಾರು ದಹಿಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಓರ್ವ ವ್ಯಕ್ತಿ ಸುಟ್ಟು ಕರಕಲಾಗಿದ್ದ. ಈ ಬಗ್ಗೆ ಅನುಮಾನಗೊಂಡ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಮೃತರನ್ನು ನಾಗರಾಜು ಎಂದು ಗುರುತಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.