ಚೆನ್ನೈ(ತಮಿಳುನಾಡು): ತುರ್ತು ಸಂದರ್ಭಗಳಲ್ಲಿ ಅಪ್ಲಿಕೇಶನ್ ಮೂಲಕ ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಪಾವತಿಸದಿದ್ದರೆ ಸಂಕಷ್ಟಕ್ಕೆ ಸಿಲುಕುವುದು ಖಚಿತ. ಸಾಲವನ್ನು ಪಾವತಿಸದಿದ್ದಾಗ ಅಪ್ಲಿಕೇಶನ್ ಪ್ರತಿನಿಧಿಗಳು ಕೋಪಗೊಳ್ಳುವುದು ಸರ್ವೇ ಸಾಮಾನ್ಯ. ಇವರ ಬೆದರಿಕೆಗಳು ಜನಸಾಮಾನ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಸಚಿವರು, ಮಾಜಿ ಸಚಿವರೂ ಇಂತಹ ಪರಿಸ್ಥಿತಿಯನ್ನು ಎದುರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ನೆಲ್ಲೂರು ಮೂಲದ ಅಶೋಕ್ ಕುಮಾರ್ ಎಂಬುವರು ರೂ. 9 ಲಕ್ಷ ಸಾಲವನ್ನು ಆ್ಯಪ್ ಮೂಲಕ ಪಡೆದಿದ್ದರು. ಅದನ್ನು ಮರುಪಾವತಿಸಲು ವಿಫಲವಾಗಿದ್ದಾರೆ. ಪರ್ಯಾಯ ದೂರವಾಣಿ ಸಂಖ್ಯೆ ನೀಡುವಾಗ ಅಲ್ಲಿ ಸಚಿವರ ನಂಬರ್ ನೀಡಿದ್ದಾರೆ. ಈ ವೇಳೆ ಸಾಲದ ಆ್ಯಪ್‌ನ ನಿರ್ವಾಹಕರು ಸಚಿವರಿಗೆ ಫೋನ್ ಮಾಡಿ ಸಾಲ ಕಟ್ಟುವಂತೆ ಪೀಡಿಸಿದ್ದಾರೆ. ಹೌದು, ಆಂಧ್ರಪ್ರದೇಶದ ಕೃಷಿ ಸಚಿವ ಕಾಕಣಿ ಗೋವರ್ಧನ ರೆಡ್ಡಿ ಅವರಿಗೆ ಲೋನ್ ಆ್ಯಪ್‌ನ ನಿರ್ವಾಹಕರು ತೊಂದರೆ ಕೊಟ್ಟಿದ್ದಾರೆ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಸಚಿವರ ಪಿ.ಎ ಉತ್ತರಿಸಿದ್ದಾರೆ. ಆದ್ರೂ ಅವರು ಕರೆ ಮಾಡುವುದನ್ನು ನಿಲ್ಲಿಸಲಿಲ್ಲ. ಸುಮಾರು 79 ಬಾರಿ ಸಚಿವರಿಗೆ ಕರೆ ಮಾಡಿ ಪೀಡಿಸಿದ್ದಾರೆ. ಬಳಿಕ ಸಚಿವ ಕಾಕಣಿ ಜಿಲ್ಲಾ ಎಸ್ಪಿ ವಿಜಯರಾವ್ ಅವರಿಗೆ ದೂರು ಸಲ್ಲಿಸಿದರು.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಆ್ಯಪ್ ನಿರ್ವಾಹಕರನ್ನು ಚೆನ್ನೈನಲ್ಲಿ ಬಂಧಿಸಿದ್ದಾರೆ. ನೆಲ್ಲೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾಪು ನೇಸ್ತಂ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡು ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಆ್ಯಪ್ ನಿರ್ವಾಹಕರ ಕಿರುಕುಳದ ಬಗ್ಗೆ ವಿವರಿಸಿದರು. ಮುತ್ಕೂರಿನಲ್ಲಿ ನಡೆದ ನಮ್ಮ ಸರ್ಕಾರದ ಕಾರ್ಯಕ್ರಮದ ವೇಳೆ ನನ್ನ ನಂಬರ್‌ಗೆ 79 ಬಾರಿ ಕರೆ ಮಾಡಲಾಗಿತ್ತು. ನನಗೆ ಕರೆ ಮಾಡಿದ್ದು ಏಕೆ ಎಂದು ವಿಚಾರಿಸಿದಾಗ ಸಾಲ ಪಡೆದಿರುವ ಅಶೋಕ್ ಕುಮಾರ್ ಪರ್ಯಾಯವಾಗಿ ನನ್ನ ನಂಬರ್ ಕೊಟ್ಟಿದ್ದಾಗಿ ತಿಳಿಸಿದ್ದಾರೆ. ಅದಕ್ಕೇ ಕರೆ ಮಾಡುತ್ತಿದ್ದೇವೆ ಎನ್ನುತ್ತಿದ್ದರು. ಪೊಲೀಸರು ವಿವರ ಸಂಗ್ರಹಿಸಿ ನಾಲ್ವರನ್ನು ಬಂಧಿಸಿದ್ದಾರೆ. ಇವರನ್ನು ಬಿಡಿಸಲು 10 ಜನ ಖ್ಯಾತ ವಕೀಲರು ಬಂದಿರುವುದು ಅಚ್ಚರಿ ಮೂಡಿಸಿದೆ ಎಂದು ಸಚಿವರು ಹೇಳಿದರು.