ಚಲಿಸುತ್ತಿದ್ದ ರೈಲಿನಿಂದ ಬಿದ್ದು ಗಾಯಗೊಂಡ ಆಂಧ್ರಪ್ರದೇಶದ ಐಟಿ ಮಹಿಳೆ ಚೆನ್ನೈ:ಚಲಿಸುತ್ತಿದ್ದ ರೈಲಿನಿಂದ ಬಿದ್ದು ಯುವತಿಯೊಬ್ಬಳು ತೀವ್ರ ಗಾಯಗೊಂಡಿರುವ ಘಟನೆ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಸಂತ್ರಸ್ತೆಯನ್ನು ಆಂಧ್ರಪ್ರದೇಶದ ಚಿತ್ತೂರಿನ ಕಾರುಣ್ಯ (24) ಎಂದು ಗುರುತಿಸಲಾಗಿದ್ದು, ಚೆಂಗಲ್ಪಟ್ಟುವಿನಲ್ಲಿ ಐಟಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.
ಕಾರುಣ್ಯ ಅವರು ಸ್ನೇಹಿತರ ಜೊತೆ ಕೇರಳಕ್ಕೆ ಪ್ರವಾಸ ಹೊರಟಿದ್ದು, ನಿನ್ನೆ ರಾತ್ರಿ ಚೆನ್ನೈನಿಂದ ತಿರುವನಂತಪರಂ ಎಕ್ಸ್ಪ್ರೆಸ್ ಮೂರನೇ ದರ್ಜೆಯ ಎಸಿ ಕಂಪಾರ್ಟ್‌ಮೆಂಟ್‌ಗೆ ಹತ್ತಿದ್ದರು. ಸುಮಾರು ಸಂಜೆ 7.45ರ ಹೊತ್ತಿಗೆ ಮೆಟ್ಟಿಲುಗಳ ಬಳಿ ತಮ್ಮ ಗೆಳೆಯ ಪುರಶೈವಕಕ್‌ನ ರಾಜೇಶ್ (29) ಅವರೊಂದಿಗೆ ಮಾತನಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ರೈಲು ಚಲಿಸಲು ಪ್ರಾರಂಭಿಸುತ್ತಿದ್ದಂತೆ, ಕಾರುಣ್ಯ ಅವರ ಕಾಲು ಜಾರಿ ಮೆಟ್ಟಿಲುಗಳ ಕೆಳಗೆ ಬಿದ್ದಿದ್ದಾರೆ. ರೈಲು ಚಲಿಸುತ್ತಿದ್ದ ಕಾರಣ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಕ್ಕಿಹಾಕಿಕೊಂಡು ಸ್ವಲ್ಪ ದೂರದವರೆಗೆ ಸಾಗಿದ್ದಾರೆ. ಯುವತಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ರಾಜೇಶ್ ಕೂಡ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದಿದ್ದಾರೆ.
ಸ್ಥಳದಲ್ಲಿದ್ದ ಪ್ರಯಾಣಿಕರು ತಕ್ಷಣ ಎಚ್ಚೆತ್ತು, ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ. ಅಲ್ಲೇ ಇದ್ದವರಲ್ಲಿ ಒಬ್ಬರು ರೈಲಿನಲ್ಲಿ ಸಿಲುಕಿಹಾಕಿಕೊಂಡಿದ್ದ ರಾಜೇಶ್ ಅವರನ್ನು ರಕ್ಷಿಸಿದ್ದಾರೆ. ತಕ್ಷಣವೇ ರೈಲು ನಿಂತಿದ್ದು, ಸಿಲುಕಿಕೊಂಡಿದ್ದ ಕಾರುಣ್ಯ ಅವರನ್ನು ರಕ್ಷಿಸಿ, ಅಲ್ಲೇ ಇದ್ದ ತಳ್ಳುವ ಗಾಡಿಯಲ್ಲಿ ಕರೆದುಕೊಂಡು ಹೋಗಲಾಗಿದೆ. ತುರ್ತು ಸೇವೆಗಳನ್ನು ತಕ್ಷಣವೇ ಕರೆಸಿ ಇಬ್ಬರನ್ನೂ ಆಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.
ಆಸ್ಪತ್ರೆ ಆಡಳಿತ ಮಂಡಳಿ ಪ್ರಕಾರ, ಕಾರುಣ್ಯ ಅವರ ಕಾಲು ಮತ್ತು ಸೊಂಟಕ್ಕೆ ಫ್ರ್ಯಾಕ್ಚರ್ ಆಗಿದೆ. ಆದರೆ ರಾಜೇಶ್ ಅವರ ಗಾಯದ ಬಗ್ಗೆ ಇನ್ನೂ ಮಾಹಿತಿ ಬಹಿರಂಗಗೊಂಡಿಲ್ಲ. ಆಘಾತಕಾರಿ ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸೆಂಟ್ರಲ್ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿಯಲು ತನಿಖೆ ನಡೆಸುತ್ತಿದ್ದಾರೆ. ತಕ್ಷಣದ ಕ್ರಮದಿಂದ ಇಬ್ಬರ ಪ್ರಾಣ ಉಳಿಸಿದ ಧೈರ್ಯಶಾಲಿ ಪ್ರಯಾಣಿಕರಿಗೆ ರೈಲ್ವೆ ಅಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಈ ಅಪಘಾತವು ರೈಲು ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ಸುರಕ್ಷತಾ ಕ್ರಮಗಳು ಮತ್ತು ಜಾಗರೂಕತೆಯನ್ನು ಅನುಸರಿಸುವ ಪ್ರಾಮುಖ್ಯತೆಯ ಬಗ್ಗೆ ಮತ್ತೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ :ಮಂಗಳೂರು: ಸಂಚರಿಸುತ್ತಿದ್ದ ರೈಲಿಗೆ ಹತ್ತಲು ಹೋದ ವೃದ್ಧನನ್ನು ರಕ್ಷಿಸಿದ ರೈಲ್ವೇ ಸಿಬ್ಬಂದಿ