ಅಮರಾವತಿ (ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರ ಆರೋಪ ಸಂಬಂಧ ಅತೃಪ್ತ ವೈಎಸ್ಆರ್ ಕಾಂಗ್ರೆಸ್ ಸಂಸದ ರಘುರಾಮ ಕೃಷ್ಣರಾಜು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಗುರುವಾರ ಹೈಕೋರ್ಟ್ ಕೈಗೆತ್ತಿಕೊಂಡಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಸಚಿವರು ಮತ್ತು ಐಪಿಎಸ್, ಐಎಎಸ್ ಅಧಿಕಾರಿಗಳು ಸೇರಿದಂತೆ 41 ಜನರಿಗೆ ನೋಟಿಸ್ ಜಾರಿ ಮಾಡಲು ಉಚ್ಛ ನ್ಯಾಯಾಲಯ ಆದೇಶಿಸಿದೆ.
ಹಣಕಾಸು ಅವ್ಯವಹಾರದ ಕುರಿತು ಸಿಬಿಐ ತನಿಖೆಗೆ ಕೋರಿ ಸಂಸದ ರಘುರಾಮ ಅರ್ಜಿ ಸಲ್ಲಿಸಿದ್ದಾರೆ. ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿ, ಮುಂದಿನ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಿದೆ. ಇದಕ್ಕೂ ಮುನ್ನ ಸರ್ಕಾರದ ಪರವಾಗಿ ಅಡ್ವೋಕೆಟ್ ಜನರಲ್ ಶ್ರೀರಾಮ್ ವಾದ ಮಂಡಿಸಿ, ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ವೈಯಕ್ತಿಕ ಉದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ. ಹೀಗಾಗಿ ಈ ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂದರು. ಅಲ್ಲದೇ, ಅರ್ಜಿ ಸಲ್ಲಿಸಿದ ನಂತರವೂ ರಘುರಾಮ ಕೃಷ್ಣರಾಜು ಮಾಧ್ಯಮಗಳಲ್ಲಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ ಎಂದು ಆಕ್ಷೇಪಣೆ ಸಲ್ಲಿಸಿದರು.
ಅರ್ಜಿದಾರ ರಘುರಾಮ ಪರ ವಾದಿಸಿದ ಹಿರಿಯ ವಕೀಲ ಉನ್ನಂ ಮುರಳೀಧರ್, ಅರ್ಜಿ ಸಲ್ಲಿಸಿದ ನಂತರ ಸರ್ಕಾರ ಕೆಲವು ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ತಮ್ಮ ಹಿಂಬಾಲಕರಿಗೆ ಅನುಕೂಲವಾಗುವಂತೆ ಸಿಎಂ ನಡೆದುಕೊಂಡಿದ್ದಾರೆ. ಮರಳು, ಮದ್ಯ, ಆರೋಗ್ಯ ಇಲಾಖೆಗೆ ಕೆಲ ಉಪಕರಣಗಳು, ಸಿಮೆಂಟ್ ಖರೀದಿಯಲ್ಲಿ ಸಿಎಂ ಜಗನ್ ತಮ್ಮ ಸಂಬಂಧಿಕರು ಹಾಗೂ ಹಿಂಬಾಲಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.