ಅಮರಾವತಿ: ದೇವಾಲಯಗಳು ಹಿಂದೂ ಧರ್ಮದ ಪ್ರತೀಕ. ಹಿಂದೂ ಧರ್ಮವನ್ನು ರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಆಂಧ್ರ ಪ್ರದೇಶ ಸರ್ಕಾರ, ರಾಜ್ಯದ ಪ್ರತಿ ಜಿಲ್ಲೆಯಲ್ಲೂ ದೇವಸ್ಥಾನ ಇರುವುದನ್ನು ಖಚಿತಪಡಿಸಿಕೊಳ್ಳಲು 3,000 ದೇಗುಲಗಳ ನಿರ್ಮಾಣಕ್ಕೆ ಮುಂದಾಗಿದೆ. ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಕೊಟ್ಟು ಸತ್ಯನಾರಾಯಣ ಹೇಳಿದ್ದಾರೆ.
"ಹಿಂದೂ ನಂಬಿಕೆಯನ್ನು ಬೃಹತ್ ಪ್ರಮಾಣದಲ್ಲಿ ರಕ್ಷಿಸಲು ಮತ್ತು ಪ್ರಚಾರ ಮಾಡುವ ಉದ್ದೇಶದಿಂದ ದುರ್ಬಲ ವರ್ಗಗಳ ಪ್ರದೇಶಗಳಲ್ಲಿ ದೇವಾಲಯಗಳ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗಿದೆ" ಎಂದು ದತ್ತಿ ಸಚಿವರೂ ಆಗಿರುವ ಸತ್ಯನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. "ತಿರುಮಲ ತಿರುಪತಿ ದೇವಸ್ಥಾನದ ಶ್ರೀ ವಾಣಿ ಟ್ರಸ್ಟ್, ದೇವಾಲಯಗಳ ನಿರ್ಮಾಣಕ್ಕೆ ತಲಾ 10 ಲಕ್ಷ ರೂಪಾಯಿ ನೀಡಲಿದೆ. 1,330 ದೇವಾಲಯಗಳ ನಿರ್ಮಾಣ ಪ್ರಾರಂಭದ ಜೊತೆಗೆ ಇನ್ನೂ 1,465 ದೇವಸ್ಥಾನಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಅದೇ ರೀತಿ ಕೆಲವು ಶಾಸಕರ ಮನವಿ ಮೇರೆಗೆ 200ಕ್ಕೂ ಹೆಚ್ಚು ದೇಗುಲಗಳನ್ನು ನಿರ್ಮಿಸಲಾಗುವುದು. ಉಳಿದವುಗಳನ್ನು ಇತರೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ನಿರ್ಮಿಸಲಾಗುವುದು" ಎಂದಿದ್ದಾರೆ.
"ದತ್ತಿ ಇಲಾಖೆಯ ಅಧೀನದಲ್ಲಿ 978 ದೇವಸ್ಥಾನಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಪ್ರತಿ 25 ದೇವಸ್ಥಾನದ ಕಾಮಗಾರಿಯನ್ನು ಒಬ್ಬ ಸಹಾಯಕ ಎಂಜಿನಿಯರ್‌ಗೆ ವಹಿಸಲಾಗಿದೆ. ಕೆಲವು ದೇವಾಲಯಗಳನ್ನು ಪುನರುಜ್ಜೀವನಗೊಳಿಸಲು ಮತ್ತು ದೇವಸ್ಥಾನಗಳಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸಲು 270 ಕೋಟಿ ರೂ.ಯ ಸಿಜಿಎಫ್ ನಿಧಿಯಲ್ಲಿ ಈಗಾಗಲೇ 238 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ" ಎಂದು ಸಚಿವರು ಮಾಹಿತಿ ನೀಡಿದ್ದಾರೆ.