ಅಮಲಾಪುರಂ(ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ಹೊಸದಾಗಿ ರಚನೆಯಾಗಿರುವ ಕೋನಸೀಮಾ ಜಿಲ್ಲೆಗೆ ಬಿಆರ್ ಅಂಬೇಡ್ಕರ್ ಕೋನಸೀಮಾ ಎಂದು ಮರುನಾಮಕರಣ ಮಾಡಲು ಮುಂದಾಗಿರುವುದಕ್ಕೆ ವ್ಯಾಪಕ ವಿರೋಧ ಆಕ್ರೋಶ ವ್ಯಕ್ತವಾಗ್ತಿದೆ. ಇದೇ ವಿಚಾರವಾಗಿ ಆಂಧ್ರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಸಚಿವರು ಹಾಗೂ ಶಾಸಕರ ಮನೆಗೆ ಬೆಂಕಿ ಹಚ್ಚಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಸಚಿವ ಪಿನಿಪೆ ವಿಶ್ವರೂಪ್ ಹಾಗೂ ಕೋನಸೀಮಾ ಜಿಲ್ಲೆಯಲ್ಲಿ ಶಾಸಕ ಪೊನ್ನಡ ಸತೀಶ್ ಎಸ್ ಅವರ ನಿವಾಸಕ್ಕೆ ಬೆಂಕಿ ಹಚ್ಚಲಾಗಿದ್ದು, ಘಟನೆಯಲ್ಲಿ 20ಕ್ಕೂ ಅಧಿಕ ಪೊಲೀಸರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಆಂಧ್ರಪ್ರದೇಶದಲ್ಲಿ ಭುಗಿಲೆದ್ದ ಹಿಂಸಾಚಾರ, ಸಚಿವರ ಮನೆಗೆ ಬೆಂಕಿ ಕಳೆದ ಏಪ್ರಿಲ್ ತಿಂಗಳ ನಾಲ್ಕರಂದು ಪೂರ್ವ ಗೋದಾವರಿಯಲ್ಲಿ ಕೋನಸೀಮಾ ಹೊಸ ಜಿಲ್ಲೆಯಾಗಿ ರಚನೆಯಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಕಳೆದ ವಾರ ಕೋನಸೀಮಾವನ್ನ ಬಿಆರ್ ಅಂಬೇಡ್ಕರ್ ಕೋನಸೀಮಾ ಎಂದು ಮರುನಾಮಕರಣ ಮಾಡಲು ಕೋರಿ ಪ್ರಾಥಮಿಕ ಅಧಿಸೂಚನೆ ಹೊರಸಿತ್ತು. ಜೊತೆಗೆ ಆಕ್ಷೇಪಣೆಗಳನ್ನ ಜನರಿಂದ ಆಹ್ವಾನಿಸಿತ್ತು. ಇದಕ್ಕೆ ಸಾಧನಾ ಸಮಿತಿ ಆಕ್ಷೇಪ ವ್ಯಕ್ತಪಿಡಿಸಿ, ಅದೇ ಹೆಸರು ಉಳಿಸಿಕೊಳ್ಳಲು ಬಯಸಿತ್ತು. ಹಿಂಸಾಚಾರದ ವೇಳೆ ಪೊಲೀಸ್ ವಾಹನ, ಶಿಕ್ಷಣ ಸಂಸ್ಥೆಗಳ ಬಸ್ ಸಹ ಬೆಂಕಿಗಾಹುತಿಯಾಗಿದ್ದು, ಅನೇಕ ಪೊಲೀಸರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.
ಇದನ್ನೂ ಓದಿ:ವಿಡಿಯೋ: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ.. ಕಂಬಕ್ಕೆ ಕಟ್ಟಿ ಯುವಕನಿಗೆ ಥಳಿಸಿದ ಗ್ರಾಮಸ್ಥರು
ಇದೇ ವಿಚಾರವಾಗಿ ಇಂದು ಪ್ರತಿಭಟನೆ ನಡೆಸುವುದರ ಜೊತೆಗೆ ಮರುನಾಮಕರಣ ವಿರೋಧಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಲು ಮುಂದಾಗಿತ್ತು. ಈ ವೇಳೆ ಪೊಲೀಸರು ಇವರು ನಡೆಸುತ್ತಿದ್ದ ಪ್ರತಿಭಟನೆ ವಿಫಲಗೊಳಿಸಲು ಪ್ರಯತ್ನಿಸಿದ್ದರಿಂದ ಹಿಂಸಾಚಾರಕ್ಕೆ ಕಾರಣವಾಗಿದೆ. ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿ, ಅಶ್ರವಾಯು ಪ್ರಯೋಗ ಮಾಡಿದ್ದರಿಂದ ಹಿಂಸಾಚಾರ ಭುಗಿಲೆದ್ದು, ಕೋನಸೀಮಾ ಸಾಧನಾ ಸಮಿತಿ ಸದಸ್ಯರು ಸಚಿವರ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ, ಸಚಿವರು ಹಾಗೂ ಅವರ ಕುಟುಂಬಸ್ಥರನ್ನ ಸುರಕ್ಷಿತವಾಗಿ ಬೇರೊಂದು ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವೆ ತಾನೇಟಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಲಾಗುತ್ತದೆ. ತಪ್ಪಿತಸ್ಥ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಘಟನೆ ಹಿಂದೆ ಕೆಲ ರಾಜಕೀಯ ಪಕ್ಷ ಹಾಗೂ ಸಮಾಜ ಘಾತುಕ ಶಕ್ತಿಗಳ ಕೈವಾಡವಿದ್ದು, ಹಿಂಸಾಚಾರ ನಡೆಸಲು ಪ್ರೇರೇಪಣೆ ನೀಡಿವೆ ಎಂದಿದ್ದಾರೆ.