ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ದೇಶದಲ್ಲಿ ಆರಂಭವಾಗಿರುವ ಸರ್ವಾಧಿಕಾರ ಕಲ್ಪನೆಯ ವಿರುದ್ಧ ಧ್ವನಿ ಎತ್ತಿದವರಿಗೆ ಶಿಕ್ಷೆ ನೀಡಲಾಗುತ್ತಿದೆ. ಪ್ರಜಾಪ್ರಭುತ್ವದ ಸಾವಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಸುಮಾರು ಒಂದು ಶತಮಾನದಿಂದ ಇಕ್ಕಟ್ಟಿನ ವಾತಾವರಣವಿದೆ. ಬಡವರು, ಮಧ್ಯಮ ವರ್ಗದವರು ಅನೇಕ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಯಾರಾದರೂ ಸರ್ವಾಧಿಕಾರದ ವಿರುದ್ಧ ಮಾತನಾಡಿದರೆ ಅವರ ವಿರುದ್ಧ ಆಕ್ರಮಣ ಮಾಡಲಾಗುತ್ತದೆ. ಸತ್ಯದ ಪರ ಧ್ವನಿ ಎತ್ತಿದವರನ್ನ ಥಳಿಸಿ, ಬಂಧಿಸಿ, ಜೈಲಿಗೆ ಹಾಕಲಾಗುತ್ತದೆ ಎಂದು ಆರೋಪಿಸಿದರು.
ಜನರ ಸಮಸ್ಯೆಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ, ಸಮಾಜದಲ್ಲಿ ನಡೆಯುತ್ತಿರುವ ಹಿಂಸೆ ಕುರಿತು ಯಾರೂ ಧ್ವನಿ ಎತ್ತಬಾರದು. ಕೇಂದ್ರ ಸರ್ಕಾರ ದೊಡ್ಡ ಉದ್ಯಮಿಗಳ ಹಿತಾಸಕ್ತಿ ಕಾಪಾಡಲು ಮಾತ್ರ ಆಸಕ್ತಿ ತೋರುತ್ತಿದೆ. 4-5 ಜನರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದಲೇ ಸರ್ಕಾರ ನಡೆಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.