ಭೋಪಾಲ್ (ಮಧ್ಯಪ್ರದೇಶ) :ಸ್ವಂತ ಬಲದ ಮೇಲೆ ಬಿಜೆಪಿ ಸರ್ಕಾರ ರಚನೆ ಮಾಡುವವರೆಗೂ ಕಾಲಿಗೆ ಚಪ್ಪಲಿ, ಶೂ ಧರಿಸುವುದಿಲ್ಲ ಎಂದು ಶಪಥ ತೊಟ್ಟಿದ್ದ ಮಧ್ಯಪ್ರದೇಶದ ಬಿಜೆಪಿ ನಾಯಕರೊಬ್ಬರು ಬರೋಬ್ಬರಿ 6 ವರ್ಷಗಳ ನಂತರ ಶೂ ಧರಿಸಿದರು. ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಶೂ ತೊಡಿಸುವ ಮೂಲಕ ಶಪಥ ಕೊನೆಗೊಳಿಸಿದರು.
ಅನುಪ್ಪುರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ರಾಮದಾಸ್ ಪುರಿ ಅವರು ಈ ಶಪಥ ಮಾಡಿದವರು. 2018 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತು ಅಧಿಕಾರ ಕಳೆದುಕೊಂಡಿತ್ತು. ಅಂದೇ ರಾಮದಾಸ್ ಪುರಿ ಅವರು, ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾಗುವವರೆಗೆ ಬರಿಗಾಲಿನಲ್ಲೇ ನಡೆದಾಡುವೆ ಎಂದು ಪ್ರತಿಜ್ಞೆ ಮಾಡಿದ್ದರು. ಇದೀಗ ಅವರ ಮಾತು ಫಲಿಸಿದೆ. ರಾಜ್ಯದಲ್ಲಿ ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭೂತಪೂರ್ವ ಜಯಭೇರಿ ಬಾರಿಸಿ ಸರ್ಕಾರ ರಚನೆ ಮಾಡಿದೆ.
ಕಾಲಿಗೆ ಶೂ ತೊಡಿಸಿದ ಮಾಜಿ ಸಿಎಂ:ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಕಾರಣ ತಮ್ಮ ಪ್ರತಿಜ್ಞೆಯನ್ನು ಕೈಬಿಡಲು ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಕೋರಿದರು. ರಾಮದಾಸ್ ಪುರಿ ಅವರ ನಿವಾಸಕ್ಕೆ ತೆರಳಿದ ಮಾಜಿ ಸಿಎಂ, ಸ್ವತಃ ಅವರೇ ಪುರಿ ಅವರ ಕಾಲಿಗೆ ಶೂ ತೊಡಿಸಿದರು. ಈ ಮೂಲಕ 6 ವರ್ಷಗಳ ಬಳಿಕ ಅವರು ಕಾಲಿಗೆ ಶೂ ಧರಿಸಿದರು. ಇದರ ವಿಡಿಯೋವನ್ನು ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಯಾಕೆ, ಯಾವಾಗ ಶಪಥ ಮಾಡಿದ್ದ ಬಿಜೆಪಿ ನಾಯಕ?:ರಾಮದಾಸ್ ಪುರಿ ಅವರು 2017ರಲ್ಲಿ ಪಾದರಕ್ಷೆ ಧರಿಸುವುದನ್ನು ನಿಲ್ಲಿಸಿದರು. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವವರೆಗೂ ತಾವು ಕಾಲಿಗೆ ಏನನ್ನೂ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಕೇಸರಿ ಪಕ್ಷ ಸೋಲು ಕಂಡಿತ್ತು. ಕಾಂಗ್ರೆಸ್ನ ಕಮಲನಾಥ್ ಅವರು ಸಿಎಂ ಆಗಿ ಅಧಿಕಾರ ಹಿಡಿದಿದ್ದರು. 2020 ರಲ್ಲಿ ಕಾಂಗ್ರೆಸ್ನಲ್ಲಿ ನಾಯಕರ ಪಕ್ಷಾಂತರವಾಗಿ ಸರ್ಕಾರ ಪತನವಾಗಿತ್ತು. ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರಿತ್ತು.
ಆದರೂ ರಾಮದಾಸ್ ಪುರಿ ಅವರು ಬಿಜೆಪಿ ಜನರ ಬೆಂಬಲದಿಂದಲೇ ಸರ್ಕಾರ ರಚನೆಯಾಗಬೇಕು. ಅಲ್ಲಿಯವರೆಗೂ ಚಪ್ಪಲಿ ಕೂಡ ಧರಿಸಲ್ಲ ಎಂದು ತಮ್ಮ ಪ್ರತಿಜ್ಞೆಯನ್ನು ಮುಂದುವರಿಸಿದ್ದರು. ಇದೀಗ 2013 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 163 ಸ್ಥಾನಗಳಲ್ಲಿ ಅಭೂತಪೂರ್ವ ಜಯ ಗಳಿಸಿತು. ಅಧಿಕಾರದ ಆಸೆ ಕಂಡಿದ್ದ ಕಾಂಗ್ರೆಸ್ ಕೇವಲ 66 ಸ್ಥಾನಗಳಲ್ಲಿ ಗೆದ್ದು ಪ್ರತಿಪಕ್ಷ ಸ್ಥಾನಕ್ಕೆ ಸೀಮಿತವಾಯಿತು. ಇದರಿಂದ ರಾಮದಾಸ್ ಪುರಿ ಅವರ ಆಸೆ ಮತ್ತು ಶಪಥ ಪೂರ್ಣವಾದ್ದರಿಂದ ಶೂ ಧರಿಸಿದರು.
ಈ ಬಗ್ಗೆ ಮಾತನಾಡಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು, ಪಕ್ಷದ ಜಿಲ್ಲಾಧ್ಯಕ್ಷರಾದ ರಾಮದಾಸ್ ಪುರಿ ಅವರು 2017 ರಿಂದ ಶೂ ಮತ್ತು ಚಪ್ಪಲಿ ಧರಿಸುವುದನ್ನು ತ್ಯಜಿಸಿದ್ದರು. ಬರಿಗಾಲಿನಲ್ಲೇ ಪಕ್ಷದ ಪರವಾಗಿ ಚುನಾವಣೆಗಳಲ್ಲಿ ಪ್ರಚಾರ ನಡೆಸಿದ್ದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಅವರು, ಆರು ವರ್ಷಗಳ ಕಾಲ ಅವರು ಬಿಸಿಲು, ಚಳಿ ಅಥವಾ ಮಳೆಯೆನ್ನದೇ ಬರಿಗಾಲಿನಲ್ಲಿಯೇ ಇದ್ದರು. ಅವರ ಸಂಕಲ್ಪ ಇದೀಗ ಈಡೇರಿದೆ. ಅವರೀಗ ಶೂ ಧರಿಸಿದರು ಎಂದು ತಿಳಿಸಿದರು.
ಇದನ್ನೂ ಓದಿ:ಕೋಳಿ ಗರಿಗಳಿಂದ ಪರಿಸರ ಸ್ನೇಹಿ ಪ್ಲಾಸ್ಟಿಕ್ ಬೌಲ್ ತಯಾರಿಸಿದ ಐಐಟಿ ಕಾನ್ಪುರದ ಇನ್ಕ್ಯುಬೇಟೆಡ್ ಕಂಪನಿ