ಮುಂಬೈ: ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಕೊರೊನಾ ರೋಗಿಗಳ ಸಹಕಾರಿಯಾಗುವಂತೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಗೆ ಆಮ್ಲಜನಕ ಸಾಂದ್ರಕಗಳು ಮತ್ತು ಬೈಪಾಪ್ ಯಂತ್ರಗಳನ್ನು ನೀಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ.
ಅನುಪಮ್ ಖೇರ್ ಫೌಂಡೇಶನ್, ಡಾ.ಅಶುತೋಷ್ ತಿವಾರಿ (ಗ್ಲೋಬಲ್ ಕ್ಯಾನ್ಸರ್ ಫೌಂಡೇಶನ್, ಯುಎಸ್ಎ) ಮತ್ತು ಬಾಬಾ ಕಲ್ಯಾಣಿ (ಭಾರತ್ ಫೊರ್ಜ್, ಭಾರತ) ಸಹಯೋಗದೊಂದಿಗೆ ಇತ್ತೀಚೆಗೆ ''ಪ್ರಾಜೆಕ್ಟ್ ಹೀಲ್ ಇಂಡಿಯಾ '' ಎಂಬ ಅಭಿಯಾನ ಪ್ರಾರಂಭಿಸಲಾಗಿದೆ.
ಯೋಜನೆಯ ಮೂಲಕ, ಭಾರತದಾದ್ಯಂತದ ವೈದ್ಯಕೀಯ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ನಿರ್ಣಾಯಕ ಜೀವ ಉಳಿಸುವ ಉಪಕರಣಗಳು ಮತ್ತು ಇತರ ಜೀವ - ಪೋಷಕ ಸಾಧನಗಳನ್ನು ಒದಗಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಅಗತ್ಯವಿರುವ ಕಡೆಗಳಲ್ಲಿ ಮತ್ತು ತ್ವರಿತ ಕ್ರಮದಿಂದ ಸಹಾಯವನ್ನು ಒದಗಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಸಂಸ್ಥೆಯ ಕಾರ್ಯ ಸೂಚಿಯಾಗಿದೆ.
''ಪ್ರಾಜೆಕ್ಟ್ ಹೀಲ್ ಇಂಡಿಯಾ '' ತನ್ನ ಮೊದಲ ಹಂತದ ಕಾರ್ಯಾಚರಣೆಯಡಿಯಲ್ಲಿ ದೇಶದ ವಿವಿಧ ವೈದ್ಯಕೀಯ ಸಂಸ್ಥೆಗಳಿಗೆ ವಿವಿಧ ದೇಣಿಗೆಗಳನ್ನು ಪ್ರಾರಂಭಿಸಿದೆ. ಹೆಚ್ಚಿನ ಬೆಂಬಲಕ್ಕಾಗಿ ಹಲವು ಸಂಸ್ಥೆಗಳನ್ನು ತಲುಪುವ ಗುರಿಯನ್ನು ಹೊಂದಿದೆ.