ನವದೆಹಲಿ: ರಾಜಧಾನಿಯ ವಾಯು ಗುಣಮಟ್ಟ ತೀರಾ ಕಳಪೆ ಮಟ್ಟಕ್ಕಿಳಿದಿದ್ದು, ಕಳೆದ ಮೂರು ದಿನಗಳಿಂದ ಇದೇ ಕಳಪೆ ಮಟ್ಟದಲ್ಲೇ ಮುಂದುವರಿದಿದೆ. ಹೊಗೆ ಮತ್ತು ವಾಯು ಮಾಲಿನ್ಯದಿಂದಾಗಿ ದೆಹಲಿಯ ಜನ ಉಸಿರುಗಟ್ಟುತ್ತಿದೆ, ಕಣ್ಣು ಉರಿಯುತ್ತಿದೆ ಎಂದು ದೂರಿದ್ದರು. ಈ ಹಿನ್ನೆಲೆ ದೆಹಲಿ ಸರ್ಕಾರ ಮಾಲಿನ್ಯ ನಿಯಂತ್ರಣಕ್ಕೆ ವಿನೂತನ ಕ್ರಮಗಳನ್ನು ಕೈಗೊಂಡಿದ್ದು, ಇಂದು ಬೆಳಗ್ಗೆ ದೆಹಲಿಯ ಬೀದಿಗಳಲ್ಲಿ ಆ್ಯಂಟಿಸ್ಮಾಗ್ ಗನ್ಗಳನ್ನು ಹೊತ್ತ ವಾಹನಗಳು ಸಂಚರಿಸಿವೆ.
ವಾಯುಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರದಿಂದ ಆ್ಯಂಟಿಸ್ಮಾಗ್ ಗನ್ ಸ್ಪ್ರೇ ಕುತುಬ್ ಮಿನಾರ್ ಪ್ರದೇಶದಲ್ಲಿ ಸಂಚರಿಸಿರುವ ಆ್ಯಂಟಿಸ್ಮಾಗ್ ಗನ್ಗಳನ್ನು ಹೊತ್ತ ವಾಹನಗಳು ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕಲು ಗಾಳಿಯಲ್ಲಿ ನೀರು ಸ್ಪ್ರೇ ಮಾಡುತ್ತಾ ಸಾಗಿವೆ. ಪಟಾಕಿ ಹಾಗೂ ತ್ಯಾಜ್ಯ ಸುಡುವುದರಿಂದ ದೆಹಲಿಯಲ್ಲಿ ದೀಪಾವಳಿ ನಂತರ ಪ್ರತಿವರ್ಷ ವಾಯು ಮಾಲಿನ್ಯದ ಮಟ್ಟ ಹೆಚ್ಚಾಗುತ್ತದೆ.
ವಾಯುಮಾಲಿನ್ಯದ ಸೂಚ್ಯಂಕ 300 ರಿಂದ 400ರವರೆಗೆ ಇದ್ದರೆ ಅದನ್ನು ಕಳಪೆ ಹಾಗೂ 400 ರಿಂದ 500 ಇದ್ದರೆ ಅದನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಇಂದು ಬೆಳಗ್ಗೆ ದೆಹಲಿಯ ವಾಯು ಗುಣಮಟ್ಟ 431 ದಾಖಲಾಗಿದೆ.
ನೋಯ್ಡಾ ಮತ್ತು ಗುರುಗ್ರಾಮ್ ಇಂದು ಬೆಳಗ್ಗೆ 7 ಗಂಟೆಗೆ ಕ್ರಮವಾಗಿ 529 ಮತ್ತು 478 ರ AQI ದಾಖಲಾಗಿದೆ. ಈ ಅತಿಯಾದ ವಾಯುಮಾಲಿನ್ಯದಿಂದಾಗಿ ನೋಯ್ಡಾದ ಎಲ್ಲಾ ಶಾಲೆಗಳಿಗೂ ರಜೆ ಘೋಷಿಸಿ, ಶಾಲೆ ಬಾಗಿಲು ಮುಚ್ಚಲಾಗಿದೆ. ಇದಲ್ಲದೆ ಪರಿಸ್ಥಿತಿಯನ್ನು ಹತೋಟಿಗೆ ತರಲು ದೆಹಲಿ ಸರ್ಕಾರ ಟ್ರಕ್ಗಳ ಸಂಚಾರಕ್ಕೆ ನಿರ್ಬಂಧ ಹೇರಿದೆ.
ತುರ್ತು ಸೇವೆಗಳಿಗೆ ಸಂಬಂಧಿಸಿದ ಟ್ರಕ್ಗಳ ಓಡಾಟಕ್ಕೆ ಮಾತ್ರ ಅವಕಾಶವನ್ನು ಕಲ್ಪಿಸಲಾಗಿದೆ. ರಾಜಧಾನಿಯ ಹಲವಾರು ನಿವಾಸಿಗಳು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ. ಇನ್ನೂ ಹಲವರು ಆನಾರೋಗ್ಯಕ್ಕೆ ತುತ್ತಾಗಿದ್ದಾರೆ. ದೆಹಲಿಯ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸುದ್ದಿಗೋಷ್ಠಿ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ದೆಹಲಿ ಸುತ್ತಮುತ್ತಲಿನ ಪ್ರದೇಶದಲ್ಲೂ ವಾಯುಗುಣಮಟ್ಟ ಮತ್ತಷ್ಟು ಹದಗೆಡುತ್ತಿದೆ. ಕಠಿಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ನ. 5 ರ ನಂತರ ವಾಯು ಮಾಲಿನ್ಯದಲ್ಲಿ ಸುಧಾರಣೆ ಕಂಡು ಬರಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಅತ್ಯಂತ ಕಳಪೆ ದೆಹಲಿಯ ವಾಯು ಗುಣಮಟ್ಟ: ಕಾರಣವೇನು?