ಕರ್ನಾಟಕ

karnataka

ETV Bharat / bharat

ಆಫ್ಘನ್​ ತಾಲಿಬಾನ್​ ವಶ: ಯಾವುದೇ ಅಪಾಯ ಎದುರಿಸಲು ಭಾರತ ಸರ್ವಸನ್ನದ್ಧ - ಬಿಪಿನ್ ರಾವತ್ - ಅಮೆರಿಕದ ಕಮಾಂಡರ್ ಅಡ್ಮಿರಲ್ ಜಾನ್ ಅಕ್ವಿಲಿನೊ

ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದನ್ನು ಭಾರತ ನಿರೀಕ್ಷಿಸಿತ್ತು. ಆದರೆ, ಇಷ್ಟು ಬೇಗ ವಶಪಡಿಸಿಕೊಳ್ಳುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಬಿಪಿನ್ ರಾವತ್
ಬಿಪಿನ್ ರಾವತ್

By

Published : Aug 25, 2021, 8:39 PM IST

ನವದೆಹಲಿ: ತಾಲಿಬಾನ್ ನಿಯಂತ್ರಿತ ಅಫ್ಘಾನಿಸ್ತಾನದಿಂದ ನಡೆಯುವ ಯಾವುದೇ ಭಯೋತ್ಪಾದನಾ ಚಟುವಟಿಕೆಗಳನ್ನು ಹಾಗೂ ಭಾರತಕ್ಕೆ ಅದರಿಂದ ಎದುರಾಗುವ ಅಪಾಯಗಳನ್ನು ದೃಢವಾಗಿ ಎದುರಿಸುತ್ತೇವೆ ಎಂದು ಮೂರು ಪಡೆಗಳ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಅಬ್ಸರ್ವರ್ ರೀಸರ್ಚ್ ಫೌಂಡೇಷನ್ (ಒಆರ್‌ಎಫ್) ಆಯೋಜಿಸಿದ್ದ ಸಂವಾದ ಕಾರ್ಯಕ್ರಮವೊಂದರಲ್ಲಿ ಅವರು ಇಂಡೋ - ಪೆಸಿಫಿಕ್ ಕಮಾಂಡ್‌ನ ಅಮೆರಿಕದ ಕಮಾಂಡರ್ ಅಡ್ಮಿರಲ್ ಜಾನ್ ಅಕ್ವಿಲಿನೊ ಜತೆ ಮಾತನಾಡಿದರು.

ಇಷ್ಟು ಬೇಗ ಹಿಡಿತಕ್ಕೆ ತೆಗೆದುಕೊಳ್ಳುತ್ತೆ ಅಂದುಕೊಂಡಿರಲಿಲ್ಲ:

ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದನ್ನು ಭಾರತ ನಿರೀಕ್ಷಿಸಿತ್ತು. ಆದರೆ, ಇಷ್ಟು ಬೇಗ ವಶಪಡಿಸಿಕೊಳ್ಳುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಕಳೆದ 20 ವರ್ಷಗಳಲ್ಲಿ ಈ ಭಯೋತ್ಪಾದನಾ ಸಂಘಟನೆ ಬದಲಾಗಿಲ್ಲ ಎಂದರು.

ಅಫ್ಘಾನಿಸ್ತಾನದಿಂದ ಹೊರಗೆ ನಡೆಯುವ ಯಾವುದೇ ಚಟುವಟಿಕೆಗಳು ಹಾಗೂ ಭಾರತಕ್ಕೆ ಅದರಿಂದ ಎದುರಾಗುವ ಅಪಾಯಗಳನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ. ಅಷ್ಟೇ ಅಲ್ಲ ನಮ್ಮ ನೆಲದಲ್ಲಿ ಭಯೋತ್ಪಾದನೆಯನ್ನು ಎದುರಿಸುತ್ತಿರುವ ರೀತಿಯಲ್ಲಿಯೇ ಎದುರಿಸುತ್ತೇವೆ ಎಂದರು.

ಭಯೋತ್ಪಾದನಾ ಚಟುವಟಿಕೆಗಳು ಕಳವಳಕಾರಿ

ಭಾರತದ ಮೇಲೆ ಪರಿಣಾಮ ಬೀರುವಂತಹ ಅಫ್ಘಾನಿಸ್ತಾನದಲ್ಲಿನ ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ಭಾರತ ಕಳವಳ ಹೊಂದಿದೆ. ಅಂತಹ ಸವಾಲನ್ನು ಸಮರ್ಥವಾಗಿ ಎದುರಿಸಲು ಕಠಿಣ ಯೋಜನೆಗಳನ್ನು ರೂಪಿಸಲಾಗಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ಆಕ್ರಮಿಸುವುದನ್ನು ಮೊದಲೇ ನಿರೀಕ್ಷಿಸಿದ್ದೆವು. ಉಗ್ರ ಚಟುವಟಿಕೆಗಳು ಅಫ್ಘಾನಿಸ್ತಾನದಿಂದ ಭಾರತಕ್ಕೆ ಹೇಗೆ ಹರಿದು ಬರುತ್ತವೆ ಎಂಬ ಅರಿವಿದ್ದು, ಈ ಬಗ್ಗೆ ಕಳವಳವೂ ಇದೆ ಎಂದು ಬಿಪಿನ್​ ರಾವತ್​ ಹೇಳಿದರು.

ಇದೇ ಸಂದರ್ಭದಲ್ಲಿ ಅವರು ಕ್ವಾಡ್ ರಾಷ್ಟ್ರಗಳು ಭಯೋತ್ಪಾದನೆ ಮಟ್ಟ ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಕರೆ ನೀಡಿದ್ದಾರೆ. ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಡಲು ಗುಪ್ತಚರ ಮಾಹಿತಿ ಪಡೆಯುವುದನ್ನು ನಾನು ಸ್ವಾಗತಿಸುತ್ತೇನೆ ಎಂದರು.

ಇದನ್ನೂ ಓದಿ: ಮಂಗಳೂರು ವಿವಿಗೆ ಅಫ್ಘಾನಿಸ್ತಾನ ವಿದ್ಯಾರ್ಥಿಗಳಿಂದ ದಾಖಲೆಯ ಅರ್ಜಿ ಸಲ್ಲಿಕೆ

ಕ್ವಾಡ್ ಸಂಘಟನೆಯು ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿದೆ. ತಾಲಿಬಾನ್​ ಪ್ರೇರಣೆಯಿಂದ ಲಷ್ಕರ್​-ಇ-ತೊಯ್ಬಾ, ಜೈಶೆ ಮೊಹಮ್ಮದ್ ಸಂಘಟನೆ ಸೇರಿ ಹಲವು ತಂಡಗಳ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ABOUT THE AUTHOR

...view details