ಕರ್ನಾಟಕ

karnataka

ETV Bharat / bharat

ಜೆಎನ್‌ಯು ಕ್ಯಾಂಪಸ್​ನಲ್ಲಿ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಬರಹ: ಮತ್ತೆ ಭುಗಿಲೆದ್ದ ವಿವಾದ - etv bharat kannada

ಪ್ರಧಾನಿ ಮೋದಿ ಮತ್ತು ಸರ್ಕಾರದ ಕುರಿತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಗೋಡೆಗಳ ಮೇಲೆ ಆಕ್ಷೇಪಾರ್ಹ ಘೋಷಣೆಗಳನ್ನು ಬರೆಯಲಾಗಿದ್ದು, ವಿವಾದ ಸೃಷ್ಟಿಯಾಗಿದೆ.

anti-modi-govt-slogans-on-jnu-walls-controversy-erupts
ಜೆಎನ್‌ಯು ಕ್ಯಾಂಪಸ್​ನಲ್ಲಿ ಪ್ರಧಾನಿ ಮೋದಿ ವಿರುದ್ಧ ಬರಹ: ಮತ್ತೆ ಭುಗಿಲೆದ್ದ ವಿವಾದ

By ETV Bharat Karnataka Team

Published : Oct 1, 2023, 4:34 PM IST

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಗೋಡೆಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಕುರಿತು ವಿವಾದಾತ್ಮಕ ಘೋಷಣೆಗಳನ್ನು ಬರೆಯಲಾಗಿದೆ. ಕ್ಯಾಂಪಸ್​ನ ಗೋಡೆಗಳ ಮೇಲೆ "ಕೇಸರಿ ಉರಿಯುತ್ತದೆ", "ಮೋದಿಯವರ ಸಮಾಧಿಯನ್ನು ಅಗೆಯಲಾಗುವುದು", "ಮುಕ್ತ ಕಾಶ್ಮೀರ" ಮತ್ತು "ಐಒಕೆ (ಭಾರತೀಯ ಆಕ್ರಮಿತ ಕಾಶ್ಮೀರ)" ಎಂಬ ಘೋಷಣೆಗಳಿವೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.

ಜೆಎನ್‌ಯು ಸ್ಕೂಲ್ ಆಫ್ ಲ್ಯಾಂಗ್ವೇಜಸ್‌ನ ಗೋಡೆಗಳಲ್ಲಿ ಕೆಂಪು ಮತ್ತು ನೀಲಿ ಬಣ್ಣದ ಶಾಯಿಯಲ್ಲಿ ಈ ಘೋಷಣೆಗಳನ್ನು ಬರೆಯಲಾಗಿದೆ. ಇದು ಯಾರ ಕೃತ್ಯ ಎಂಬ ಬಗ್ಗೆ ಜೆಎನ್‌ಯು ಆಡಳಿತ ಮಂಡಳಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ವಿಶ್ವವಿದ್ಯಾಲಯ ತನಿಖೆಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಒಂದು ವರ್ಷದ ಹಿಂದೆಯೂ ಜೆಎನ್‌ಯು ಸ್ಕೂಲ್ ಆಫ್ ಲ್ಯಾಂಗ್ವೇಜಸ್​ನ ಗೋಡೆಗಳ ಮೇಲೆ ಬ್ರಾಹ್ಮಣ ಮತ್ತು ಬನಿಯಾ ಸಮುದಾಯದ ವಿರುದ್ಧ ವಿವಾದಾತ್ಮಕ ಘೋಷಣೆಗಳನ್ನು ಬರೆಯಲಾಗಿತ್ತು. "ಬ್ರಾಹ್ಮಣರೇ ಕ್ಯಾಂಪಸ್ ತೊರೆಯಿರಿ", "ನಾವು ಬ್ರಾಹ್ಮಣರು-ಬನಿಯಾಗಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ" ಎಂದು ಬರೆಯಲಾಗಿತ್ತು. ಆಗ ಕ್ಯಾಂಪಸ್​ನಲ್ಲಿ ಇದೇ ರೀತಿಯ ವಿವಾದ ನಡೆದಿತ್ತು.

ಆ ಸಂದರ್ಭದಲ್ಲಿ ಜೆಎನ್‌ಯು ಆಡಳಿತ ಮಂಡಳಿ ತನಿಖಾ ಸಮಿತಿ ರಚಿಸಿತ್ತು. ಆದರೆ ಸಮಿತಿಯ ವರದಿಯಲ್ಲಿ ಘಟನೆಯಲ್ಲಿ ಭಾಗಿಯಾಗಿದ್ದವರ ಹೆಸರುಗಳನ್ನು ಬಹಿರಂಗಪಡಿಸಿರಲಿಲ್ಲ. ಆಗ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ವಿವಾದಾತ್ಮಕ ಘೋಷಣೆಗಳನ್ನು ಬರೆಯುತ್ತಿವೆ ಎಂದು ಎಬಿವಿಪಿ ಸಂಘಟನೆ ಆರೋಪಿಸಿತ್ತು. ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ವಿಶ್ವವಿದ್ಯಾಲಯದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಬೆಂಬಲಿತ ಸಂಘಟನೆ ಆಗ್ರಹಿಸಿತ್ತು. ಜೆಎನ್‌ಯು ಬೋಧಕರ ಮಂಡಳಿಯು, ಈ ಕೃತ್ಯದಲ್ಲಿ ಎಡಪಂಥೀಯ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿತ್ತು. ಆದರೆ, ವಿಶ್ವವಿದ್ಯಾನಿಲಯ ನಡೆಸಿದ ತನಿಖೆಯಲ್ಲಿ ಈ ಆರೋಪ ದೃಢಪಟ್ಟಿರಲಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ್ದ ಎಬಿವಿಪಿ ಅಧ್ಯಕ್ಷ ರೋಹಿತ್ ಕುಮಾರ್, "ಇಂತಹ ಅಸಭ್ಯ ಹೇಳಿಕೆಗಳನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಇಂಥ ಕೃತ್ಯಕ್ಕೆ ಎಡಪಂಥೀಯ ವಿಚಾರಧಾರೆ ಹೊಂದಿರುವ ವಿದ್ಯಾರ್ಥಿಗಳೇ ಕಾರಣ. ಜೆಎನ್‌ಯು ಗೋಡೆಗಳ ಮೇಲೆ ಅವರೇ ಆಕ್ಷೇಪಾರ್ಹ ವಿಷಯಗಳನ್ನು ಬರೆದಿದ್ದಾರೆ. ಜೊತೆಗೆ ಎಐಎಸ್ಎ ಸಹ ಇದರಲ್ಲಿ ಭಾಗಿಯಾಗಿದೆ" ಎಂದು ಆರೋಪಿಸಿದ್ದರು.

ಇದೀಗ ಮತ್ತೆ ಅಂತಹದ್ದೇ ಘಟನೆಯೊಂದು ಇದೀಗ ಬೆಳಕಿಗೆ ಬಂದಿದ್ದು, ಜೆಎನ್‌ಯು ಆಡಳಿತ ಮಂಡಳಿ ವಿವಾದಾತ್ಮಕ ಗೋಡೆಬರಹಗಳನ್ನು ಅಳಿಸಿಹಾಕಲು ಮತ್ತು ಈ ಸಂಬಂಧ ತನಿಖೆ ನಡೆಸಲು ಸೂಚನೆ ನೀಡಿದೆ.

ಇದನ್ನೂ ಓದಿ:ಜೆಎನ್‌ಯುನಲ್ಲಿ ವಿದ್ಯಾರ್ಥಿನಿಯರಿಗೆ 10 ಸಾವಿರ ದಂಡ: ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳಿಂದ ಪ್ರತಿಭಟನೆ

ABOUT THE AUTHOR

...view details