ನವದೆಹಲಿ: ಆಂತರಿಕ ಸಮೀಕ್ಷೆಯಲ್ಲಿ ತಮ್ಮ ಪಕ್ಷದ ಶಾಸಕರ ವಿರುದ್ಧ ಶೇ 30ರಷ್ಟು ಆಡಳಿತ ವಿರೋಧಿ ಅಲೆ ಕಂಡುಬಂದಿದ್ದರೂ ಸಾಮಾಜಿಕ ಅಂಶ, ಜಾತಿ ಸಮೀಕರಣ ಮತ್ತು ಗೆಲ್ಲುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳ ಸಣ್ಣ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಈ ಕುರಿತು ಈಟಿವಿ ಭಾರತ್ ಜೊತೆಗೆ ಮಾತನಾಡಿರುವ ರಾಜಸ್ಥಾನದ ಉಸ್ತುವಾರಿ ಹೊತ್ತಿರುವ ಎಐಸಿಸಿ ಕಾರ್ಯದರ್ಶಿ ವೀರೇಂದ್ರ ರಾಥೋಡ್, ಅಭ್ಯರ್ಥಿಗಳ ಸಾಮಾಜಿಕ ಅಂಶ, ಜಾತಿ ಸಮೀಕರಣ ಮತ್ತು ಗೆಲ್ಲುವ ಸಾಮರ್ಥ್ಯದ ಅಧಾರದಡಿ ನಾವು ಹೊಸ ಮಾನದಂಡ ರೂಪಿಸಿ, ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ಮಾಡಿದ್ದೇವೆ ಎಂದರು.
ಐಸಿಸಿ ಕಾರ್ಯದರ್ಶಿ, ರಾಜಸ್ಥಾನದ ಉಸ್ತುವಾರಿಯೂ ಆಗಿರುವ ಕ್ವಾಜಿ ನಿಜಾಮುದ್ದೀನ್ ಮಾತನಾಡಿ, ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಪಕ್ಷಕ್ಕೆ ವಿರೋಧಿ ಅಲೆ ಸಹಜ. ಅನೇಕ ಶಾಸಕರ ವಿರುದ್ಧ ಈ ರೀತಿ ವಿರೋಧಿ ಅಲೆ ವ್ಯಕ್ತವಾಗಿದೆಯೇ ಹೊರತು ಪಕ್ಷದ ಮೇಲಲ್ಲ. ಮತದಾರರು ಕೆಲವು ಶಾಸಕರ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಆದರೆ ಪಕ್ಷದ ವಿರುದ್ಧ ಎಲ್ಲಿಯೂ ಅಸಮಾಧಾನ ಕಂಡು ಬಂದಿಲ್ಲ. ಜನರು ಗೆಹ್ಲೋಟ್ ಸರ್ಕಾರದ ಸಾಮಾಜಿಕ ಕಲ್ಯಾಣ ಯೋಜನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿದ್ದಾರೆ ಎಂದು ಹೇಳಿದರು.
ಪಕ್ಷದ ವಿರುದ್ಧದ ಅಲೆ ಅಲ್ಲ: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿನ ಕೆಲವು ಅಸಮಾಧಾನಿತರು ಈ ರೀತಿ ವಿರೋಧಿ ಅಲೆ ಎಚ್ಚಿಸುತ್ತಿದ್ದಾರೆ. ಬಿಜೆಪಿಗೆ ಗೆಹ್ಲೋಟ್ ಸರ್ಕಾರದ ವಿರುದ್ಧ ದಾಳಿ ಮಾಡಲು ಕಾರಣ ಹುಡುಕುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಈ ರೀತಿ ಗಾಳಿ ಸುದ್ದಿ ಹಬ್ಬಿಸಿ, ಕಾಂಗ್ರೆಸ್ ವಿರೋಧಿ ಅಲೆ ಇದೆ ಎಂದು ಬಿಂಬಿಸುತ್ತಿದೆ. ಪಕ್ಷದಲ್ಲಿ ಕೆಲವು ಮಂದಿಗೆ ಟಿಕೆಟ್ ತಪ್ಪಿದ್ದು, ಅವರು ಕೂಡ ಇಂತಹ ತಪ್ಪು ಸುದ್ದಿಗಳ ಬೆನ್ನು ಬಿದ್ದಿದ್ದಾರೆ ಎಂದು ಕ್ವಾಜಿ ಕಿಡಿಕಾರಿದರು.