ಮುಂಬೈ: ದೇಶದೆಲ್ಲೆಡೆ ರಾಜಕೀಯದ ಚಹರೆಯನ್ನೇ ಬದಲಿಸಿ ಹಿಂದೂ ಭಯೋತ್ಪಾದನೆ ಎಂಬ ಪದ ಹುಟ್ಟು ಹಾಕಿದ್ದ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿದ್ದ ಮತ್ತೊಬ್ಬ ಸಾಕ್ಷಿ ಉಲ್ಟಾ ಹೊಡೆದಿದ್ದಾನೆ. ಈ ಪ್ರಕರಣದಲ್ಲಿ ಇದುವರೆಗೆ 18 ಮಂದಿ ಸಾಕ್ಷಿಗಳು ತಮ್ಮ ಹೇಳಿಕೆ ಬದಲಾಯಿಸಿದ್ದಾರೆ. ಇಂದಿನ ವಿಚಾರಣೆ ವೇಳೆ ಸಾಕ್ಷಿಯೊಬ್ಬರು ಉಲ್ಟಾ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ.
2008ರ ಸೆಪ್ಟೆಂಬರ್ 29 ರಂದು ನಡೆದ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆಯು ಪ್ರಸ್ತುತ NIA ನ್ಯಾಯಾಲಯದಲ್ಲಿ ನಡೆಯುತ್ತಿದೆ. ಹಿಂದಿನ ವಿಚಾರಣೆಯಲ್ಲೂ ಎನ್‌ಐಎ ಹಾಜರುಪಡಿಸಿದ ಸಾಕ್ಷಿ ತನ್ನ ಹೇಳಿಕೆಯನ್ನು ಬದಲಾಯಿಸಿದ್ದರು ಎಂಬುದು ಗಮನಾರ್ಹ. ಅವರು ಅಂದಿನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳಾದ ಪರಂಬಿರ್ ಸಿಂಗ್ ಮತ್ತು ಶ್ರೀ ರಾವ್ ವಿರುದ್ಧವೂ ಗಂಭೀರ ಆರೋಪ ಮಾಡಿದ್ದರು.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಎರಡು ಪ್ರತ್ಯೇಕ ಅಪಘಾತ : ಮೂವರು ವಿದ್ಯಾರ್ಥಿಗಳು ಸೇರಿ ಐವರ ದುರ್ಮರಣ
2008ರ ಸೆಪ್ಟೆಂಬರ್ 29ರಂದು ಮಾಲೆಗಾಂವ್ ನಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಮಸೀದಿಯೊಂದರ ಮುಂದೆ ನಡೆದಿದ್ದ ಬಾಂಬ್ ದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿದರೆ ಕನಿಷ್ಠ 100 ಮಂದಿ ಗಾಯಗೊಂಡಿದ್ದರು. ಎಟಿಎಸ್ ಈ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸಿತ್ತು. ಮೂರು ವರ್ಷಗಳ ನಂತರ 2011ರಲ್ಲಿ ಪ್ರಕರಣವನ್ನು ಎನ್‌ಐಎಗೆ ವಹಿಸಲಾಗಿತ್ತು.
ಈ ಪ್ರಕರಣದಲ್ಲಿ ಭೋಪಾಲ್‌ನ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಆರೋಪಿಯಾಗಿದ್ದಾರೆ. ಪ್ರಕರಣದ ಇತರ ಆರೋಪಿಗಳೆಂದರೆ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್, ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ, ಸುಧಾಕರ್ ದ್ವಿವೇದಿ ಮತ್ತು ಸಮೀರ್ ಕುಲಕರ್ಣಿ. ಆದರೆ, ಈ ಪ್ರಕರಣದ ಫಲಿತಾಂಶ ಯಾವಾಗ ಬರುತ್ತದೆ ಎಂದು ನಿಖರವಾಗಿ ಹೇಳುವುದು ಕಷ್ಟಕರವಾಗಿದೆ. ಇಂದು ಉಲ್ಟಾ ಹೊಡೆದ ಸಾಕ್ಷಿದಾರ ಆರೋಪಿ ಸಂಖ್ಯೆ 6,9,11 ಗೆ ಸಂಬಂಧಿಸಿದ ಸಾಕ್ಷಿಯಾಗಿದ್ದಾರೆ. ಇದುವರೆಗೆ ಮಾಲೆಗಾಂವ್ ಪ್ರಕರಣದಲ್ಲಿ 18 ಸಾಕ್ಷಿಗಳನ್ನು ಅನರ್ಹಗೊಳಿಸಲಾಗಿದೆ. ಮುಂದಿನ ವಿಚಾರಣೆ ಮಾರ್ಚ್ 2 ರಂದು ನಡೆಯಲಿದೆ.