ನವದೆಹಲಿ:ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಲಖಿಂಪುರ್ ಖೇರಿಯಲ್ಲಿ ರೈತರು ನಡೆಸಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಬಿಜೆಪಿ ಸಂಸದ ವರುಣ್ ಗಾಂಧಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದರು. ಈ ಹೇಳಿಕೆ ಬಿಜೆಪಿ ಪಕ್ಷದಲ್ಲಿ ತೀವ್ರ ಮುಜುಗರಕ್ಕೆ ಕಾರಣವಾಗಿತ್ತು. ಹೀಗಾಗಿ ಅವರನ್ನ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈಬಿಡಲಾಗಿದೆ. ಇದರ ಬೆನ್ನಲ್ಲೇ ರೈತರಿಗೆ ಬೆಂಬಲವಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ಮಾತನಾಡಿರುವ ಹಳೇ ವಿಡಿಯೋ ತುಣುಕವೊಂದನ್ನ ಶೇರ್ ಮಾಡಿಕೊಂಡಿದ್ದಾರೆ.
ಸುಮಾರು 41 ವರ್ಷಗಳ ಹಿಂದೆ ಅಂದರೆ 1980ರಲ್ಲಿ ಇಂದಿರಾ ಗಾಂಧಿ ಸರ್ಕಾರದ ಸಂದರ್ಭದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಅಟಲ್ ಬಿಹಾರಿ ವಾಜಪೇಯಿ ಮಾತನಾಡಿದ್ದ ವಿಡಿಯೋ ತುಣುಕು ಇದಾಗಿದೆ.
ಈ ವಿಡಿಯೋದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ರೈತರ ಮೇಲೆ ದಬ್ಬಾಳಿಕೆ ನಡೆಸದಂತೆ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಎಚ್ಚರಿಕೆ ನೀಡಿದ್ದರು. ರೈತರ ಬೇಡಿಕೆ ನ್ಯಾಯಯುತವಾಗಿದ್ದು, ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿದ್ದರೆ, ಅವರ ಆಂದೋಲನವನ್ನ ಹತ್ತಿಕ್ಕಲ್ಲು ಸರ್ಕಾರ ಪ್ರಯತ್ನಿಸಿದರೆ ನಾವು ಸರ್ಕಾರದ ವಿರುದ್ಧ ನಿಲ್ಲುತ್ತೇವೆ ಎಂದು ವಾಜಪೇಯಿ ಹೇಳಿದ್ದರು.
ಇದನ್ನೂ ಓದಿರಿ:ಅಕ್ರಮ ಪೈಪ್ ಗೋಡೌನ್ನಲ್ಲಿ ಬೆಂಕಿ.. ದಗದಗನೇ ಹೊತ್ತಿ ಉರಿದ ಗೋದಾಮು
ಈ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ವರುಣ್ ಗಾಂಧಿ ಮತ್ತೊಮ್ಮೆ ತಮ್ಮದೇ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದಿನಿಂದಲೂ ವರುಣ್ ಗಾಂದಿ ರೈತರ ಆಂದೋಲನಕ್ಕೆ ಬೆಂಬಲ ಸೂಚಿಸುತ್ತಿದ್ದು, ಕಬ್ಬಿನ ದರ ಏರಿಕೆ, ಲಖಿಂಪುರ್ ಹಿಂಸಾಚಾರ ಸೇರಿದಂತೆ ಅನೇಕ ವಿಷಯವಾಗಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೀಗಾಗಿ ಮುಜುಗರಕ್ಕೊಳಗಾಗಿರುವ ಕೇಂದ್ರ ಬಿಜೆಪಿ ಅವರನ್ನ ಬಿಜೆಪಿ ಕಾರ್ಯಕಾರಿಣಿಯಿಂದ ಕೈಬಿಟ್ಟಿದೆ.