ವಯನಾಡು(ಕೇರಳ): ದೇಶದ ವಿವಿಧ ರಾಜ್ಯಗಳ ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ ಆರಂಭವಾಗಿದೆ. ಇತ್ತೀಚೆಗೆ ಅಸಮಾಧಾನ ಕಾಣಿಸಿಕೊಂಡಿದ್ದ ಕೇರಳ ಕಾಂಗ್ರೆಸ್ನಲ್ಲಿ ಹೊಸ ಬೆಳವಣಿಗೆ ಕಾಣಿಸಿಕೊಂಡಿದೆ. ವಯನಾಡು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಪಿ.ವಿ.ಬಾಲಚಂದ್ರನ್ ಮಂಗಳವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಪಿ.ವಿ.ಬಾಲಚಂದ್ರನ್ ಅವರು ಸುಮಾರು 52 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದು, ಮಂಗಳವಾರಕ್ಕೆ ಪಕ್ಷದೊಂದಿಗಿನ ಅವರ ಒಡನಾಟ ಕೊನೆಗೊಂಡಿದೆ. ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸದಸ್ಯರಾಗಿದ್ದ ಅವರು ಕಾಂಗ್ರೆಸ್ ಪಕ್ಷ ತನ್ನ ದಿಕ್ಕನ್ನು ಬದಲಾಯಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷಕ್ಕೆ ರಾಜೀನಾಮೆ ನೀಡುವ ವೇಳೆ ಪ್ರತಿಕ್ರಿಯೆ ನೀಡಿದ ಅವರು ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಕಾಂಗ್ರೆಸ್‌ನಿಂದ ದೂರವಾಗುತ್ತಿವೆ ಮತ್ತು ಜನರು ತನ್ನ ದಿಕ್ಕನ್ನು ಬದಲಾಯಿಸಿದ ಪಕ್ಷದೊಂದಿಗೆ ಇರುವುದಿಲ್ಲ. ಬಿಜೆಪಿಯ ಬೆಳವಣಿಗೆಯನ್ನು ತಡೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.