ನವದೆಹಲಿ :ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಹಿರಿಯ ಕುಸ್ತಿಪಟುಗಳು ತಮ್ಮ ಧರಣಿ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಎಲ್ಲ ಪಕ್ಷಗಳಿಗೂ ಸ್ವಾಗತ ಎಂದು ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಕರೆ ನೀಡಿದ್ದಾರೆ. ಬಿಜೆಪಿ ಸಂಸದರೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪುನಿಯಾ ಹೇಳಿದ್ದಾರೆ.
ಇದೇ ವರ್ಷದ ಜನವರಿಯಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಬಜರಂಗ್ ಪುನಿಯಾ, ವಿನೇಶ್ ಫೋಗಟ್, ರವಿ ದಹಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಇನ್ನೂ ಹಲವಾರು ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧದ ಲೈಂಗಿಕ ಕಿರುಕುಳ ಮತ್ತು ದುರ್ನಡತೆಯ ಆರೋಪಗಳ ಬಗ್ಗೆ ತನಿಖಾ ಸಮಿತಿ ರಚಿಸಲಾಗುವುದು ಎಂಬ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅವರು ಆಗ ತಮ್ಮ ಪ್ರತಿಭಟನೆ ಹಿಂಪಡೆದಿದ್ದರು.
ಡಬ್ಲ್ಯುಎಫ್‌ಐ ಮುಖ್ಯಸ್ಥರಾಗಿರುವ ಬ್ರಿಜ್ ಭೂಷಣ್ ಅವರು ಅಪ್ರಾಪ್ತೆ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಶುಕ್ರವಾರ (ಏಪ್ರಿಲ್ 21) ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದು ಖ್ಯಾತ ಕುಸ್ತಿಪಟುಗಳು ಹೇಳಿದ್ದಾರೆ. ಆದರೆ ದೂರು ನೀಡಿ 48 ಗಂಟೆಗಳು ಕಳೆದರೂ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ ಎಂದು ಪುನಿಯಾ ಮಾಧ್ಯಮಗಳಿಗೆ ತಿಳಿಸಿದರು. ಈ ಬಾರಿ ಯಾರ ಬೆಂಬಲವನ್ನೂ ತಿರಸ್ಕರಿಸುವುದಿಲ್ಲ ಮತ್ತು ತಮ್ಮನ್ನು ಬೆಂಬಲಿಸಲು ಬಯಸುವವರು ಬಂದು ಪ್ರತಿಭಟನೆಯಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.