ಮುಂಬೈ:ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ 'ಸಿಲ್ವರ್ ಓಕ್' ನಿವಾಸಕ್ಕೆ ಗುರುವಾರ ರಾತ್ರಿ ಭೇಟಿ ನೀಡಿದ್ದರು. ಇಬ್ಬರ ನಡುವೆ ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆದಿದೆ ಎಂದು ವರದಿಯಾಗಿದ್ದು, ಈ ಭೇಟಿಯು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅಲ್ಲದೆ, ಭೇಟಿ ವೇಳೆ ಸಂಸದೆ ಸುಪ್ರಿಯಾ ಸುಳೆ ಕೂಡ ಉಪಸ್ಥಿತರಿದ್ದರೆನ್ನಲಾಗಿದೆ ಕಳೆದ ಶನಿವಾರವಷ್ಟೇ ಬಾರಾಮತಿಯಲ್ಲಿ ಗೌತಮ್ ಅದಾನಿ ಅವರನ್ನು ಶರದ್ ಪವಾರ್ ಹೊಗಳಿದ್ದರು. ಇದಕ್ಕೂ ಮೊದಲು ಶರದ್ ಪವಾರ್ ಮತ್ತು ಗೌತಮ್ ಅದಾನಿ ಸೆಪ್ಟೆಂಬರ್ ತಿಂಗಳಿನಲ್ಲಿ ಭೇಟಿಯಾಗಿದ್ದರು. ಆದರೆ, ಗುರುವಾರ ರಾತ್ರಿ ಅದಾನಿಯವರು ಪವಾರ್ ಅವರನ್ನು ದಿಢೀರ್ ಭೇಟಿ ಮಾಡಿದ ಬಳಿಕ ಇಬ್ಬರ ನಡುವೆ ಏನು ಚರ್ಚೆ ನಡೆದಿದೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.
ಧಾರಾವಿ ಪುನರಾಭಿವೃದ್ಧಿ ವಿಚಾರದಲ್ಲಿ ಅದಾನಿಯನ್ನು ಶಿವಸೇನೆ, ಉದ್ಧವ್ ಠಾಕ್ರೆ ಗುಂಪು ಮತ್ತು ಕಾಂಗ್ರೆಸ್ ಗುರಿಯಾಗಿಸಿ ಟೀಕೆ ನಡೆಸುತ್ತಿವೆ. ಮತ್ತೊಂದೆಡೆ, ಮಹಾವಿಕಾಸ್ ಅಘಾಡಿ ಘಟಕದ ಶರದ್ ಪವಾರ್ ಗೌತಮ್ ಅದಾನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಶರದ್ ಪವಾರ್ ಮತ್ತು ಗೌತಮ್ ಅದಾನಿ ಮಾತುಕತೆ ಬಗ್ಗೆ ಮಹಾವಿಕಾಸ್ ಅಘಾಡಿಯಲ್ಲಿ ಆಂತರಿಕ ಗುಸುಗುಸು ಶುರುವಾಗಿದೆ.