ಹೈದ್ರಾಬಾದ್: ಜಗತ್ತಿನ ಅತ್ಯಂತ ದೊಡ್ಡ ಫಿಲ್ಮ್ ಸಿಟಿ ಎಂಬ ಹೆಗ್ಗಳಿಕೆ ರಾಮೋಜಿ ಫಿಲಂ ಸಿಟಿಗೆ ಇದೆ. ಇದರ ಜೊತೆ ಮತ್ತೊಂದು ಗರಿಮೆ ಇದೀಗ ರಾಮೋಜಿ ಫಿಲ್ಮ್ ಸಿಟಿಗೆ ಲಭಿಸಿದೆ. ಕೇಂದ್ರ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಸಂಸ್ಥೆ (ಎಫ್ಎಸ್ಎಸ್ಎಐ) ಫಿಲ್ಮ್‌ಸಿಟಿಗೆ ಅತ್ಯುನ್ನತ ರೇಟಿಂಗ್ ಅಡಿ 'ಈಟ್ ರೈಟ್ ಕ್ಯಾಂಪಸ್' (ತಿನ್ನಲು ಉತ್ತಮ ಆಹಾರ ಹೊಂದಿರುವ ಕ್ಯಾಂಪಸ್) ಎಂದು ಪ್ರಮಾಣೀಕರಿಸಿದೆ. ರಾಷ್ಟ್ರೀಯ ಆರೋಗ್ಯ ನೀತಿ ಮಾನದಂಡಗಳ ಪ್ರಕಾರ ಫಿಲ್ಮ್ ಸಿಟಿಗೆ ಭೇಟಿ ನೀಡುವ ಅತಿಥಿಗಳು ಮತ್ತು ಪ್ರವಾಸಿಗರಿಗೆ ಸುರಕ್ಷಿತ, ನೈರ್ಮಲ್ಯ ಮತ್ತು ಪೌಷ್ಟಿಕ ಆಹಾರವನ್ನು ಒದಗಿಸುತ್ತಿದೆ ಎಂದು ತಿಳಿಸಿದೆ.
1666 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ 15 ರೆಸ್ಟೋರೆಂಟ್ ಇದೆ. ಇದರಲ್ಲಿ ತ್ರಿ ಮತ್ತು ಫೈವ್ ಸ್ಟಾರ್ ದರ್ಜೆ ಹೋಟೆಲ್ಗಳು ಇದೆ. ಈ ಎಲ್ಲವನ್ನೂ ಎಫ್ಎಸ್ಎಸ್ಎಐ ಪರಿಶೋಧನೆಗೆ ಒಳಪಡಿಸಿದ್ದು, ಗುಣಮಟ್ಟ ಪೂರೈಸಿದ ಹಿನ್ನೆಲೆ 'ಈಟ್ ರೈಟ್ ಕ್ಯಾಂಪಸ್' ಎಂದು ಪ್ರಮಾಣೀಕರಿಸಿದೆ.