ಬಾರ್ಪೇಟಾ(ಅಸ್ಸೋಂ): ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಮದರಸಾವನ್ನು ಕೆಡವಲಾಗಿದೆ. ಅಲ್ಲದೇ ಮದರಸಾದ ಶಿಕ್ಷಕನನ್ನು ಅಸ್ಸೋಂ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಈ ಒಂದು ಮದರಸಾ ಭಾನುವಾರ ಬಂಧಿಸಲಾದ ಶಂಕಿತ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಾರ್ಪೇಟಾದ ಧಕಾಲಿಯಾಪರಾ ಪ್ರದೇಶದಲ್ಲಿರುವ ಶೈಖುಲ್ ಹಿಂದ್ ಮಹಮ್ಮದುಲ್ ಹಸನ್ ಜಾಮಿಯುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯನ್ನು ಪೊಲೀಸರು ಮತ್ತು ಆಡಳಿತ ಮಂಡಳಿ ಧ್ವಂಸಗೊಳಿಸಿದೆ. ಪ್ರಾಂಶುಪಾಲ ಮಹ್ಮುನೂರ್ ರಶೀದ್ ಎಂಬುರನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ಬರ್ ಅಲಿ ಮತ್ತು ಅಬುಲ್ ಕಲಾಂ ಆಜಾದ್ ಎಂಬ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಭಾನುವಾರ ಜಿಲ್ಲೆಯ ಸೊರ್ಭೋಗ್ ಪ್ರದೇಶದ ಮನೆಯೊಂದರಿಂದ ಬಂಧಿಸಿದ್ದಾರೆ. ಇವರಿಬ್ಬರು ಅಲ್-ಖೈದಾ (ಎಕ್ಯೂಐಎಸ್) ಮತ್ತು ಅನ್ಸರುಲ್ಲಾ ಬಾಂಗ್ಲಾದೇಶದ ತಂಡ (ಎಬಿಟಿ) ಯೊಂದಿಗೆ ಮತ್ತು ಈ ಮದರಸಾದೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗ್ತಿದೆ.