ಕಾಂಜಾವಾಲಾ ಪ್ರಕರಣ: ಮತ್ತೊಂದು ಸಿಸಿಟಿವಿ ವಿಡಿಯೋ ನವದೆಹಲಿ:ದೆಹಲಿಯ ಹೊರಭಾಗದಲ್ಲಿ ಕಾರಿಗೆ ಡಿಕ್ಕಿ ಹೊಡೆದು 4 ಕಿಲೋ ಮೀಟರ್‌ಗಳವರೆಗೆ ಮಹಿಳೆಯ ದೇಹ ಎಳೆದೊಯ್ದು ಹತ್ಯೆಗೀಡಾದ ಪ್ರಕರಣ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ಈ ನಡುವೆ ಮಹಿಳೆ ಸ್ಕೂಟಿಯಲ್ಲಿ ಒಬ್ಬರೇ ಇರಲಿಲ್ಲ, ಅವರ ಜತೆಗೆ ಸ್ನೇಹಿತೆ ಕೂಡ ಇದ್ದರು ಎಂಬುದು ತಿಳಿದು ಬಂದಿದೆ. ಘಟನೆ ಕುರಿತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ವಿಡಿಯೋ ಕೂಡಾವೈರಲ್ ಆಗುತ್ತಿದೆ.
ದೃಶ್ಯಾವಳಿಗಳ ಪ್ರಕಾರ, ಅಂಜಲಿ ಮತ್ತು ನಿಧಿ ಒಟ್ಟಿಗೆ ಅಂಜಲಿಯ ಮನೆಯಿಂದ ಹೊರಬರುತ್ತಿದ್ದಾರೆ. ಅಂಜಲಿ ಸ್ಕೂಟಿ ಓಡಿಸುತ್ತಿರುವುದು ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಕಂಡು ಬರುತ್ತಿದೆ. ವಾಸ್ತವವಾಗಿ, ಈ ವಿಡಿಯೋ ಡಿಸೆಂಬರ್ 31 ರ ಸಂಜೆ ಸುಮಾರು 7.10 ನಿಮಿಷಗಳ ಸಮಯದ್ದು ಎಂದು ಹೇಳಲಾಗುತ್ತಿದೆ. ಇಬ್ಬರೂ ಇಲ್ಲಿಂದ ಹೊರಟು ಮಂಗಲಾಂ ಪಾರ್ಕ್‌ನಲ್ಲಿರುವ ಹೋಟೆಲ್‌ಗೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಆದಾಗ್ಯೂ, ಮನೆಯಿಂದ ಹೊರಡುವ ಮತ್ತು ಹೋಟೆಲ್ ತಲುಪುವ ನಡುವಿನ ಸಮಯದ ಬಗ್ಗೆ ವಿರೋಧಾಭಾಸವಿದೆ. ಸದ್ಯಕ್ಕೆ ಈ ವಿಡಿಯೋದ ಅಸಲಿ ಸತ್ಯ ಏನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ಇದನ್ನೂ ಓದಿ:ಸ್ಕೂಟಿಗೆ ಡಿಕ್ಕಿ ಹೊಡೆದು ಯುವತಿಯ ಎಳೆದೊಯ್ದ ಕಾರು.. 4 ಕಿಮೀ ದೂರದಲ್ಲಿ ನಗ್ನ ಸ್ಥಿತಿಯಲ್ಲಿ ಸಂತ್ರಸ್ತೆ ಶವ ಪತ್ತೆ
ಪ್ರಕರಣದ ವಿವರ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೊಸ ವರ್ಷದ ಆಚರಣೆ ದಿನವೇ ಸ್ಕೂಟಿಯಲ್ಲಿ ಹೋಗುತ್ತಿದ್ದ 20 ವರ್ಷದ ಯುವತಿಯನ್ನು ಕಾರಿನಲ್ಲಿ ಬಂದ ಐವರು ಯುವಕರು ಸುಮಾರು 4 ಕಿಲೋಮೀಟರ್ವರೆಗೆ ಎಳೆದೊಯ್ದಿದ್ದರು. ಈ ಘಟನೆ ನಂತರ ಸಂತ್ರಸ್ತ ಯುವತಿಯು ನಗ್ನ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಹಲವು ಅನುಮಾನಗಳಿಗೂ ಕಾರಣವಾಗಿತ್ತು.
ದೆಹಲಿಯ ಹೊರವಲಯದ ಕಾಂಜಾವಾಲಾ ಪ್ರದೇಶದಲ್ಲಿ ಡಿಸೆಂಬರ್ 31 ಮತ್ತು ಜನವರಿ 1ರ ತಡರಾತ್ರಿ ಆಘಾತಕಾರಿ ಘಟನೆ ನಡೆದಿತ್ತು. ಈ ಬಗ್ಗೆ ಭಾನುವಾರ ಬೆಳಗಿನ ಜಾವ 3.24ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಯುವತಿಯ ಶವವು ನಗ್ನ ಸ್ಥಿತಿಯಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿಯೇ ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ನಂತರ ಆಕೆಯ ಶವವನ್ನು ಎಳೆದೊಯ್ದು ಬಿಸಾಡಲಾಗಿತ್ತು ಎಂದು ಪೊಲೀಸರು ಮೊದಲಿಗೆ ಶಂಕಿಸಿದ್ದರು.
ಆದರೆ, ನಂತರ ದುಷ್ಟರು, ಯುವತಿಯನ್ನು ಎಳೆದೊಯ್ದಿರುವ ಕಾರಣ ಆಕೆಯ ಸ್ಕೂಟಿ ಅಪಘಾತಕ್ಕೀಡಾಗಿ ಮತ್ತು ಕಾರಿನ ಚಕ್ರಕ್ಕೆ ಆಕೆಯ ಬಟ್ಟೆ ಸಿಕ್ಕಿಹಾಕಿಕೊಂಡು ಸಾವಿಗೀಡಾಗಿದ್ದಾಳೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇದರ ಆಧಾರದ ಮೇಲೆ ಸದ್ಯ ಕಾರಿನಲ್ಲಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ದೀಪಕ್ ಖನ್ನಾ, ಅಮಿತ್ ಖನ್ನಾ, ಕ್ರಿಶನ್, ಮಿತ್ತು ಹಾಗೂ ಮನೋಜ್ ಮಿತ್ತಲ್ ಎಂದು ಗುರುತಿಸಲಾಗಿದೆ.
ನಡೆದಿದ್ದು ಏನು?: ಹೊಸ ವರ್ಷ ಆಚರಣೆಯ ಹೊಸ್ತಿಲಲ್ಲೇ ಯುವತಿಯೊಬ್ಬಳನ್ನು ಕಾರಿಗೆ ಕಟ್ಟಿ ಎಳೆದುಕೊಂಡು ಹೋಗಲಾಗುತ್ತಿದೆ ಎಂದು ಬೆಳಗಿನ ಜಾವ 3.24ರ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ಅಲ್ಲಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕರೆ ಮಾಡಿದವರ ಮೊಬೈಲ್ ಸಂಖ್ಯೆಗೆ ಕಾಂಜಾವಾಲಾ ಪೊಲೀಸ್ ಠಾಣೆಯ ತಂಡ ನಿರಂತರವಾಗಿ ಸಂಪರ್ಕಿಸಿತ್ತು. ಇದಾದ ನಂತರ ಯುವತಿಯನ್ನು ಎಳೆದೊಯ್ದುತ್ತಿದ್ದ ಕಾರಿನ ಗುರುತು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜಕೀಯ ಕೆಸರೆರಚಾಟಕ್ಕೂ ಕಾರಣವಾದ ಪ್ರಕರಣ:ಈ ನಡುವೆ ಇದು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರನ್ನು ಮುಜುಗುರಕ್ಕೆ ಸಿಲುಕುವಂತೆ ಮಾಡಿದೆ. ಇನ್ನು ದುರಂತದಲ್ಲಿ ಸಾವಿಗೀಡಾದ ಮಹಿಳೆಯ ಪೋಷಕರು ಇದು ಅತ್ಯಾಚಾರ ಎಂದು ದೂರಿದ್ದರು. ಅಲ್ಲದೇ ಈ ಬಗ್ಗೆ ದೆಹಲಿ ಪೊಲೀಸರ ವಿರುದ್ಧ ದೊಡ್ಡ ಪ್ರತಿಭಟನೆ ನಡೆಸಿ ಆಕ್ರೋಶ ಕೂಡ ವ್ಯಕ್ತಪಡಿಸಲಾಗಿತ್ತು. ಮತ್ತೊಂದು ಕಡೆ ಆಪ್ ಪಕ್ಷ ಗವರ್ನರ್ ನಿವಾಸಕ್ಕೆ ಮುತ್ತಿಗೆ ಹಾಕಿ, ತನಿಖೆಗೆ ಒತ್ತಾಯಿಸಿತ್ತು.
ಅತ್ಯಾಚಾರ ಅಲ್ಲ ಎಂದ ಪೊಲೀಸರು:ಈ ಸಂಬಂಧ ಪ್ರಾಥಮಿಕ ತನಿಖೆ ನಡೆಸಿದ್ದ ಪೊಲೀಸರು ಇದು ಅತ್ಯಾಚಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ, ಅತ್ಯಾಚಾರ ಅಲ್ಲ ಎಂದು ಹೇಳಿದ್ದಾರೆ.