ಪ್ರಯಾಗರಾಜ್ (ಉತ್ತರ ಪ್ರದೇಶ):ಉಮೇಶ್ ಪಾಲ್ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ವಿಜಯ್ ಅಲಿಯಾಸ್ ಉಸ್ಮಾನ್ನನ್ನು ಇಂದು ಮುಂಜಾನೆ ಎನ್ಕೌಂಟರ್ನಲ್ಲಿ ಪ್ರಯಾಗ್ರಾಜ್ ಪೊಲೀಸ್ ತಂಡ ಹೊಡೆದುರುಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಧುಮಂಗಂಜ್ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ರಾಜೇಶ್ ಕುಮಾರ್ ಮೌರ್ಯ, ಬೆಳಗ್ಗೆ 5.30ರ ಸುಮಾರಿಗೆ ಕೌಂಧಿಯಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎನ್ಕೌಂಟರ್ ನಡೆಯಿತು. ಉಸ್ಮಾನ್ ಫೆಬ್ರವರಿ 24ರಂದು ಉಮೇಶ್ ಪಾಲ್ ಮತ್ತು ಇತರ ಇಬ್ಬರು ಪೊಲೀಸರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಎಂದು ಹೇಳಿದರು.
ಘಟನೆ ನಡೆದ ಒಂದೆರಡು ದಿನಗಳ ಅಂತರದಲ್ಲಿ ಅಂದರೆ, ಕಳೆದ ತಿಂಗಳು ಧೂಮಂಗಂಜ್ನ ನೆಹರೂ ಪಾರ್ಕ್ ಪ್ರದೇಶದ ಬಳಿ ನಡೆದ ಎನ್ಕೌಂಟರ್ನಲ್ಲಿ ಇನ್ನೊಬ್ಬ ಆರೋಪಿಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಉಮೇಶ್ ಪಾಲ್ ಅವರನ್ನು ಹತ್ಯೆ ಮಾಡುವ ಸಂದರ್ಭದಲ್ಲಿ ಬಳಸಿದ ಕಾರನ್ನು ಅರ್ಬಾಜ್ ಎಂಬಾತ ಓಡಿಸುತ್ತಿದ್ದ. ಎನ್ಕೌಂಟರ್ ವೇಳೆ ಅರ್ಬಾಜ್ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.