ಎರ್ನಾಕುಲಂ (ಕೇರಳ): ದುಡ್ಡಿರುವ ಬಹುತೇಕರು ಯಾರಿಗಾದರೂ ಅಲ್ಪ ಸಹಾಯ ಮಾಡಿದರೆ ಸಾಕು, ಅದನ್ನೇ ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಆದ್ರೆ ದೇವರನಾಡು ಎಂದೇ ಖ್ಯಾತಿ ಪಡೆದಿರುವ ಕೇರಳದ ಮಗುವಿಗೆ ಕರುಣಾಮಯಿಯೊಬ್ಬರು ಬರೋಬ್ಬರಿ 11 ಕೋಟಿ ರೂಪಾಯಿ ನೆರವು ನೀಡಿದರೂ ಸಹ ತನ್ನ ಹೆಸರನ್ನು ಬಹಿರಂಗ ಪಡಿಸದಂತೆ ಮನವಿ ಮಾಡಿದ್ದಾರೆ. ದಿನೇ ದಿನೇ ಘಟಿಸುತ್ತಿರುವ ಅಮಾನವೀಯ ಘಟನೆಗಳ ನಡುವೆಯೂ ಇನ್ನೂ ಮನುಷ್ಯತ್ವಕ್ಕೆ ಬೆಲೆ ಇದೆ ಎಂದು ಅನೇಕರು ತೋರಿಸಿಕೊಟ್ಟಿದ್ದಾರೆ. ಇದೀಗ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಕೇರಳದ ಪುಟ್ಟ ಮಗುವಿಗೆ ವಿದೇಶದ ಅಪರಿಚಿತ ವ್ಯಕ್ತಿಯೊಬ್ಬರು 11 ಕೋಟಿ ರೂ. ಧನಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೇರಳದ 16 ತಿಂಗಳ ಮಗು ನಿರ್ವಾಣ್ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಎಂಬ ರೋಗದಿಂದ ಬಳಲುತ್ತಿದೆ. ಮಗುವನ್ನು ಕಾಯಿಲೆಯಿಂದ ಪಾರು ಮಾಡಲು ಮತ್ತು ಜೀವ ಉಳಿಸಲು 17 ಕೋಟಿ ರೂ. ಮೌಲ್ಯದ ಚುಚ್ಚುಮದ್ದಿನ ಅವಶ್ಯಕತೆ ಇದೆ. ಹೀಗಾಗಿ, ಕಳೆದ ಕೆಲವು ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿರ್ವಾಣ್‌ಗೆ ಸಹಾಯ ಮಾಡುವಂತೆ ಕೆಲ ಮೆಸೇಜ್‌ಗಳು ಹರಿದಾಡುತ್ತಿದ್ದವು.
ಪ್ರಪಂಚದ ವಿವಿಧ ಭಾಗಗಳಿಂದ ಮತ್ತು ವಿವಿಧ ಪ್ರದೇಶಗಳಿಂದ ಜನರು ತಮ್ಮ ಕೈಲಾದಷ್ಟು ಸಹಾಯವನ್ನು ನೀಡುತ್ತಲೇ ಇದ್ದರು. ಆದರೆ, 17 ಕೋಟಿ ರೂ ಮೊತ್ತವನ್ನು ತಲುಪುವುದು ಕಷ್ಟವಾಗಿತ್ತು. ಹೀಗಿರುವಾಗ ಅಪರಿಚಿತ ವ್ಯಕ್ತಿಯೊಬ್ಬರು ನಿರ್ವಾಣ್‌ಗೆ ವೈದ್ಯಕೀಯ ಸಹಾಯಕ್ಕಾಗಿ ಬರೋಬ್ಬರಿ 11 ಕೋಟಿ ರೂಪಾಯಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತವನ್ನು ನೀಡಿದರೂ ಸಹ ತಮ್ಮ ಹೆಸರನ್ನು ಬಹಿರಂಗಪಡಿಸಿಲ್ಲ. ಹೆಸರು ಅಥವಾ ಪ್ರಸಿದ್ಧಿಗಾಗಿ ಇದನ್ನು ಮಾಡುತ್ತಿಲ್ಲ, ಮಗು ಗುಣಮುಖವಾದರೆ ಅಷ್ಟೇ ಸಾಕು ಎಂದಿದ್ದಾರೆ. ಹಾಗೆಯೇ, ನಿರ್ವಾಣ್ ಚೇತರಿಸಿಕೊಂಡ ನಂತರ ಮಗುವಿಗಾಗಿ ಇಷ್ಟು ದೊಡ್ಡ ಮೊತ್ತದ ಧನ ಸಹಾಯ ಮಾಡಿದ ವ್ಯಕ್ತಿಯನ್ನು ಭೇಟಿಯಾಗುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಕ್ರೌಡ್ ಫಂಡಿಂಗ್ ಮೂಲಕ ವಿದೇಶದಿಂದ ಹಣ ಬಂದಿದ್ದು, ಬಡ ಕುಟುಂಬ ಇನ್ನೂ 80 ಲಕ್ಷ ರೂಪಾಯಿ ಹಣ ಹೊಂದಿಸಬೇಕಿದೆ. ಉಳಿದ ಹಣಕ್ಕಾಗಿ ನಿರ್ವಾಣ್ ತಂದೆ ಸಾರಂಗ್ ಮತ್ತು ತಾಯಿ ಅತಿದಿ ಹರಸಾಹಸ ಪಡುತ್ತಿದ್ದಾರೆ. ಮಗುವಿಗೆ ಎರಡು ವರ್ಷ ತುಂಬುವ ಮುನ್ನವೇ ಔಷಧಿ ನೀಡಿದರೆ ಮಾತ್ರ ಚಿಕಿತ್ಸೆ ಫಲಕಾರಿಯಾಗಲಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.