ಇತ್ತೀಚೆಗಿನ ದಿನಗಳಲ್ಲಿ ಪತ್ರಕರ್ತರ ಮೇಲಿನ ಹಲ್ಲೆ ಸಂಬಂಧ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಜರ್ನಲಿಸ್ಟ್ ಸಂಸ್ಥೆ ಅಂಕಿ ಅಂಶಗಳ ಬಿಡುಗಡೆ ಮಾಡಿದ್ದು, ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
2020ರಲ್ಲಿ ವಿಶ್ವದಾದ್ಯಂತ ಒಟ್ಟು 65 ಪತ್ರಕರ್ತರು ಮತ್ತು ಮಾಧ್ಯಮ ಕಾರ್ಯಕರ್ತರು ಕರ್ತವ್ಯ ನಿರ್ವಹಿಸುವಾಗಲೇ ಕೊಲ್ಲಲ್ಪಟ್ಟರು ಎಂದು ತಿಳಿಸಿದೆ. ಅದು 2019ಕ್ಕೆ ಹೋಲಿಸಿದರೆ 17 ಮಂದಿ ಹತ್ಯೆ ಹೆಚ್ಚಾಗಿದೆ, ಮತ್ತು 1990ರ ದಶಕದಲ್ಲಿ ಸಾವಿನ ಸಂಖ್ಯೆ ಅದೇ ಮಟ್ಟದಲ್ಲಿದೆ ಎಂದು ಫೆಡರೇಶನ್ ಶುಕ್ರವಾರ ತನ್ನ ವಾರ್ಷಿಕ ವರದಿಯ ವಿವರಗಳನ್ನು ಪ್ರಕಣೆಯಲ್ಲಿ ತಿಳಿಸಿದೆ. ಇದಲ್ಲದೆ 200ಕ್ಕೂ ಹೆಚ್ಚು ಪತ್ರಕರ್ತರು ತಮ್ಮ ಕೆಲಸದಿಂದಾಗಿ ಪ್ರಸ್ತುತ ಜೈಲಿನಲ್ಲಿದ್ದಾರೆ ಎಂದು ಐಎಫ್‌ಜೆ ವರದಿ ಮಾಡಿದೆ.
1990ರಲ್ಲಿ ಐಎಫ್‌ಜೆ ವರದಿ ಪ್ರಕಟಿಸಲು ಪ್ರಾರಂಭಿಸಿದಾಗಿನಿಂದ ಒಟ್ಟು 2,680 ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ. ‘ಮೆಕ್ಸಿಕೊದಲ್ಲಿ ನಿರ್ದಯ ಆಡಳಿತ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಸೊಮಾಲಿಯಾದಲ್ಲಿ ಉಗ್ರಗಾಮಿಗಳ ಹಿಂಸಾಚಾರ, ಹಾಗೆಯೇ ಭಾರತ ಮತ್ತು ಫಿಲಿಪೈನ್ಸ್‌ನಲ್ಲಿ ಕಠಿಣವಾದಿಗಳ ಅಸಹಿಷ್ಣುತೆ ಮಾಧ್ಯಮಗಳಲ್ಲಿ ನಿರಂತರ ರಕ್ತಪಾತಕ್ಕೆ ಕಾರಣವಾಗಿದೆ’ ಎಂದು ಐಎಫ್‌ಜೆ ಪ್ರಧಾನ ಕಾರ್ಯದರ್ಶಿ ಆಂಥೋನಿ ಬೆಲ್ಲಾಂಜರ್ ಹೇಳಿದ್ದಾರೆ.
5 ವರ್ಷಗಳಲ್ಲಿ 4ನೇ ಬಾರಿಗೆ, 14 ಕೊಲೆಗಳೊಂದಿಗೆ ಮೆಕ್ಸಿಕೊ ಹೆಚ್ಚು ಪತ್ರಕರ್ತರು ಕೊಲ್ಲಲ್ಪಟ್ಟ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.ಅದರ ನಂತರ ಅಫ್ಘಾನಿಸ್ತಾನದಲ್ಲಿ 10 ಸಾವುಗಳು ಸಂಭವಿಸಿದವು; ಪಾಕಿಸ್ತಾನದಲ್ಲಿ 9, ಭಾರತದಲ್ಲಿ 8, ಫಿಲಿಪೈನ್ಸ್ ಮತ್ತು ಸಿರಿಯಾದಲ್ಲಿ ತಲಾ ನಾಲ್ವರು ಮತ್ತು ನೈಜೀರಿಯಾ ಮತ್ತು ಯೆಮನ್‌ನಲ್ಲಿ ತಲಾ ಮೂವರು ಸಾವಿಗೀಡಾಗಿದ್ದಾರೆ.