ಪಹಲ್ಗಾಮ್ (ಜಮ್ಮು ಮತ್ತು ಕಾಶ್ಮೀರ) : ಅಮರನಾಥ ಯಾತ್ರೆ ಇಂದಿನಿಂದ ಪ್ರಾರಂಭವಾಗಿದೆ. ಪಹಲ್ಗಾಮ್ ನನ್ವಾನ್ ಬೇಸ್ ಕ್ಯಾಂಪ್ಯಿಂದ ಅಮರನಾಥ ಯಾತ್ರಾರ್ಥಿಗಳ ಮೊದಲ ತಂಡವು ಶಿವಲಿಂಗದ ದರ್ಶನಕ್ಕಾಗಿ ತೆರಳಿದ್ದು, ಡೆಪ್ಯುಟಿ ಕಮಿಷನರ್ ಅನಂತನಾಗ್ ಸೈಯದ್ ಫಕ್ರುದ್ದೀನ್ ಹಮೀದ್ ಮತ್ತು ಅಮರನಾಥ ಯಾತ್ರೆಯ ನೋಡಲ್ ಅಧಿಕಾರಿ ಡಾ. ಪಿಯೂಷ್ ಸಿಂಗ್ಲಾ ಅವರು 1,997 ಮಂದಿಯ ಮೊದಲ ಬ್ಯಾಚ್‌ಗೆ ಚಾಲನೆ ನೀಡಿದರು.
ಇದಕ್ಕೂ ಮುನ್ನ ಶುಕ್ರವಾರ ದಕ್ಷಿಣ ಕಾಶ್ಮೀರದ ಭಗವತಿ ನಗರ ಬೇಸ್ ಕ್ಯಾಂಪ್‌ನಿಂದ ಯಾತ್ರಾರ್ಥಿಗಳಿಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಚಾಲನೆ ನೀಡಿದ್ದರು. 3,880 ಮೀಟರ್ ಎತ್ತರದಲ್ಲಿರುವ ಅಮರನಾಥ ದೇಗುಲಕ್ಕೆ ಮೊದಲ ಬ್ಯಾಚ್‌ನಲ್ಲಿ 3,400 ಕ್ಕೂ ಹೆಚ್ಚು ಮಂದಿ ಭಕ್ತರು ಯಾತ್ರೆ ಆರಂಭಿಸಿದ್ದಾರೆ.
ಯಾತ್ರಾರ್ಥಿಗಳಿಗೆ ಗಂಡರ್‌ಬಾಲ್ ಜಿಲ್ಲೆಯ ಬಾಲ್ಟಾಲ್ ಮತ್ತು ಪಹಲ್ಗಾಮ್‌ನಲ್ಲಿರುವ ಕ್ಯಾಂಪಸ್‌ಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿತ್ತು. ಶನಿವಾರ (ಇಂದು) ಬೆಳಗ್ಗೆ 'ಬಾಬಾ ಬರ್ಫಾನಿ' ದರ್ಶನ ಪಡೆದ ಬಳಿಕ ಅಧಿಕೃತವಾಗಿ ಅಮರನಾಥ ಯಾತ್ರೆ 2023 ಅನ್ನು ಪ್ರಾರಂಭಿಸಲಾಗಿದೆ.
ಅಮರನಾಥ ಯಾತ್ರೆಯನ್ನು ಶಾಂತಿಯುತವಾಗಿ ನಡೆಸಲು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸೂಕ್ತ ಭದ್ರತೆಗಾಗಿ ಪೊಲೀಸ್, ಸಿಆರ್‌ಪಿಎಫ್, ಐಟಿಬಿಪಿ ಮತ್ತು ಸೇನೆಯನ್ನು ನಿಯೋಜಿಸಲಾಗಿದೆ. ಜೊತೆಗೆ ಯಾತ್ರಾರ್ಥಿಗಳ ರಕ್ಷಣೆಗೆ ಹೆಚ್ಚುವರಿಯಾಗಿ 85 ಸಿಆರ್‌ಪಿಎಫ್ ಸಿಬ್ಬಂದಿ ನಿಯೋಜಿಸಲಾಗಿದೆ. ಈ ಮಧ್ಯೆ, ಜಿಲ್ಲಾಡಳಿತವು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಗಾಗಿ ಹೊಸ ಸಂಚಾರ ಯೋಜನೆಯನ್ನು ಸಿದ್ಧಪಡಿಸಿದೆ, ಇದರಲ್ಲಿ ಯಾತ್ರಾರ್ಥಿಗಳ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಯಾತ್ರೆಯ ಸಮಯದಲ್ಲಿ ನಾಗರಿಕ ಸಂಚಾರವನ್ನು ನಿರ್ಬಂಧಿಸಲಾಗಿದೆ.